ನವದೆಹಲಿ: ಹಿರಿಯ ಪ್ರಯಾಣಿಕರೊಬ್ಬರು ತಾವು ಕೇಳಿದ ಸಸ್ಯಾಹಾರದ ಬದಲಿಗೆ ಮಾಂಸಾಹಾರವನ್ನು ನೀಡಿದ್ದಾನೆಂದು ಆಹಾರ ವಿತರಕ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಹೌರಾದಿಂದ ರಾಂಚಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ನಲ್ಲಿ ನಡೆದಿದೆ.
ಊಟದ ಪ್ಯಾಕೆಟ್‌ನಲ್ಲಿನ ಲೇಬಲ್ ಅನ್ನು ಗಮನಿಸದ ಹಿರಿಯ ವ್ಯಕ್ತಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದಾರೆ. ತಿಂದ ನಂತರ ಮಾಂಸಾಹಾರವೆಂದು ಗೊತ್ತಾಗಿದ್ದು, ಇದರಿಂದ ಕುಪಿತಗೊಂಡ ಅವರು ಆಹಾರ ವಿತರಿಸಿದ ಸಿಬ್ಬಂದಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾರೆ.
ಇದು ಇತರ ಪ್ರಯಾಣಿಕರಿಗೆ ಹಿಡಿಸಲಿಲ್ಲ, ಮಧ್ಯಪ್ರವೇಶಿಸಿದ ಪ್ರಯಾಣಿಕರು ಹಿರಿಯ ಪ್ರಯಾಣಿಕ ಆಹಾರ ವಿತರಕ ಸಿಬ್ಬಂದಿಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಿರಿಯ ಪ್ರಯಾಣಿಕನ ವರ್ತನೆಗೆ ಅಸಮಾಧಾನಗೊಂಡಿರುವ ಸಹ ಪ್ರಯಾಣಿಕರು ಆತನ ವಿರುದ್ಧ ಹರಿಹಾಯ್ದಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಘಟನೆಯ ಬಗ್ಗೆ ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾಶ್ ಚರಣ್ ಪ್ರತಿಕ್ರಿಯಿಸಿದ್ದು, ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅದನ್ನು ಬಗೆಹರಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

