ತಿರುಪತಿಯ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ಶ್ರೀಮಂತ ದೇವರೆಂದೆ ಖ್ಯಾತಿ ಪಡೆದಿದ್ದಾನೆ. ಈ ಶ್ರೀಮಂತ ದೇವರಿಗೆ ಭಕ್ತರು ಬರೋಬ್ಬರಿ 25 ಕೆ.ಜಿಯ ಚಿನ್ನದ ಒಡೆವೆಗಳನ್ನ ಧರಿಸಿಕೊಂಡು ಬಂದಿದ್ದಾರೆ.
ಮಹಾರಾಷ್ಟ್ರದ ಪುಣೆ ಮೂಲದ ಕುಟುಂಬವೊಂದು ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನಕ್ಕೆಂದು ತಿರುಪತಿಗೆ ಭೇಟಿ ನೀಡಿದೆ. ಕುಟುಂಬದ ಮಹಿಳೆ ಸೀರೆ ಧರಿಸಿದ್ರೆ, ಇಬ್ಬರು ವ್ಯಕ್ತಿಗಳು ಬನಿಯನ್ ಹಾಗೂ ಪಂಚೆ ಹಾಕಿದ್ದರು. ಈ ವೇಳೆ ದೇವರ ದರ್ಶನ ಪಡೆಯಲು ತೆರಳುವಾಗ ಆ ಕುಟುಂಬದ ಇಬ್ಬರು ವ್ಯಕ್ತಿಗಳು, ಓರ್ವ ಮಹಿಳೆ ಹಾಗೂ ಒಂದು ಮಗು ಇವರೆಲ್ಲ ಸೇರಿ ಒಟ್ಟು 25 ಕೆ.ಜಿ ಮೌಲ್ಯದ ಚಿನ್ನದ ಆಭರಣಗಳನ್ನು ಧರಿಸಿದ್ದಾರೆ.
ಇದರಲ್ಲಿ ಮಹಿಳೆ ಧರಿಸಿದ ಒಡೆವೆಗಳು ಎಲ್ಲರ ಕಣ್ಮನ ಸೆಳೆಯುವಂತೆ ಇವೆ. ಇನ್ನು ವ್ಯಕ್ತಿ ಕುತ್ತಿಗೆಗೆ ಹಾಕಿಕೊಂಡಿದ್ದ ಚಿನ್ನ ಸರಪಣಿಯಂತೆ ಡಿಸೈನ್ ಮಾಡಲಾಗಿದೆ. ವ್ಯಕ್ತಿ ಬ್ರ್ಯಾಂಡೆಡ್ ಸನ್ಗ್ಲಾಸ್ ಅನ್ನು ಕೂಡ ಹಾಕಿಕೊಂಡಿದ್ದಾರೆ. ಪುಣೆ ಕುಟುಂಬ ಹಾಕಿಕೊಂಡಿರುವ ಚಿನ್ನಾಭರಣಗಳ ಒಟ್ಟು ಮೊತ್ತ ಬರೋಬ್ಬರಿ 16 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ನಿಖರ ಎಷ್ಟು ಎನ್ನುವುದು ತಿಳಿದು ಬಂದಿಲ್ಲ ಸದ್ಯ ಇಷ್ಟೊಂದು ಮೊತ್ತದ ಚಿನ್ನಾಭರಣಗಳನ್ನು ಧರಿಸಿ ತಿಮ್ಮಪ್ಪನ ದರ್ಶನ ಪಡೆದುಕೊಂಡ ಕುಟುಂಬದ ದೃಶ್ಯಗಳನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ವಿಡಿಯೋ ನೋಡಿದವರೆಲ್ಲ ಒಂದು ಕ್ಷಣ ಬೆರಗಾಗುತ್ತಿದ್ದಾರೆ. ಆದರೆ ಈ ಕುಟುಂಬ ಯಾವುದು, ತಿಮ್ಮಪ್ಪನ ಬಳಿಗೆ ಬಂದವರ ಹೆಸರೇನು ಎಂಬುದು ಯಾರಿಗೂ ತಿಳಿದಿಲ್ಲ.

