ಛತ್ತೀಸ್‌ಗಡ: ಎನ್‌ಡಿಎ ಬಹುಮತದೊಂದಿಗೆ ಗೆಲವು ಸಾಧಿಸಿರುವ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಬೆರಳು ಕತ್ತರಿಸಿ ಕಾಳಿ ದೇವಿಗೆ ಅರ್ಪಿಸಿರುವ ಘಟನೆ ಛತ್ತೀಸ್‌ಗಡದ ಬಾಲರಾಮ್‌ಪುರದಲ್ಲಿ ನಡೆದಿದೆ.
ದುರ್ಗೇಶ್ ಪಾಂಡೆ ಎಂಬಾತ ಬಿಜೆಪಿ ಬೆಂಬಲಿಗ. ಜೂ.4ರಂದು ಚುನಾವಣಾ ಫಲಿತಾಂಶ ಹೊರಬಿದ್ದಾಗ ಆರಂಭದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದಂತೆ ತೀವ್ರ ಬೇಸರಗೊಂಡಿದ್ದನಂತೆ. ಈ ಬಾರಿ ಅಧಿಕಾರ ಎನ್‌ಡಿಎ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕಕ್ಕೆ ಬಿದ್ದ ದುರ್ಗೇಶ್, ಕಾಳಿ ಮಂದಿರಕ್ಕೆ ತೆರಳಿ ಬಿಜೆಪಿ ಗೆಲುವಿಗೆ ಪ್ರಾರ್ಥಿಸಿದ್ದಾನೆ. ಅಲ್ಲದೇ ತನ್ನ ಒಂದು ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ.
ಬೆರಳು ಕತ್ತರಿಸಿಕೊಂಡ ದುರ್ಗೇಶ್ ಪಾಂಡೆ, ಬಟ್ಟೆಯನ್ನು ಕಟ್ಟಿ ಸುರಿಯುತ್ತಿದ್ದ ರಕ್ತವನ್ನು ತಡೆಯಲು ಯತ್ನಿಸಿದ್ದಾನೆ. ಆದರೆ ರಕ್ತ ಮಾತ್ರ ನಿಲ್ಲಲೇ ಇಲ್ಲ. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಆತನ ಕುಟುಂಬಸ್ಥರು ಆತನನ್ನು ತಕ್ಷಣ ಸಮಾರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಲ್ಲಿಂದ ಆತನನ್ನು ಅಂಬಿಕಾಪುರದ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿತ್ತು. ಬಹಳ ಹೊತ್ತಾದ ಕಾರಣ ನಜ್ಜುಗುಜ್ಜಾಗಿದ್ದ ಆತನ ಬೆರಳನ್ನು ಮತ್ತೆಜೋಡಿಸಲು ಸಾಧ್ಯವಾಗಿಲ್ಲ. ಅದ್ಯ ಚಿಕಿತ್ಸೆ ಮುಂದುವರೆದಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದುರ್ಗೇಶ್ ಪಾಂಡೆ, ಆರಂಭಿಕ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವುದನ್ನು ಕಂಡು ನಾನು ವಿಚಲಿತನಾದೆ. ಮತ್ತೊಂದೆಡೆ ಕಾಂಗ್ರೆಸ್ ಬೆಂಬಲಿಗರು ಕೂಡ ಉತ್ಸಾಹದಲ್ಲಿದ್ದರು.
ಇಡೀ ಗ್ರಾಮವು ನಂಬಿರುವ ಕಾಳಿ ದೇವಸ್ಥಾನಕ್ಕೆ ನಾನು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಬಿಜೆಪಿ ಗೆಲುವಿಗೆ ಬೆರಳು ಕೊಡುವುದಾಗಿ ಪ್ರತಿಜ್ಞೆ ಮಾಡಿದ್ದೆ. ಅಂದು ಸಂಜೆ ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗ, ನಾನು ದೇವಸ್ಥಾನಕ್ಕೆ ಹೋಗಿ, ನನ್ನ ಬೆರಳು ಕತ್ತರಿಸಿ ಅದನ್ನು ಅರ್ಪಿಸಿದೆ, ಬಿಜೆಪಿ ಈಗ ಸರ್ಕಾರ ರಚಿಸುತ್ತದೆ, ಆದರೆ ಅವರು (ಎನ್‌ಡಿಎ) 400 ರ ಗಡಿ ದಾಟಿದರೆ ನನಗೆ ಹೆಚ್ಚು ಸಂತೋಷವಾಗುತ್ತಿತ್ತು ಎಂದಿದ್ದಾನೆ.

