ರಷ್ಯಾದ ಮಹಿಳಾ ಚೆಸ್ ಆಟಗಾರ್ತಿಯೊಬ್ಬರು ತನ್ನ ಪ್ರತಿಸ್ಪರ್ಧಿಗೆ ವಿಷಪ್ರಾಸನ ಮಾಡಿದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದೆ.
ಈ ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪರ್ಧೆ ನಡೆಯುವುದಕ್ಕೆ ಮೊದಲೇ ಸ್ಪರ್ಧೆ ಆಯೋಜಿಸಿದ ಕೊಠಡಿಗೆ ಬರುವ ಆರೋಪಿ ಸ್ಪರ್ಧಿ ಅಲ್ಲಿ ಚೆಸ್ ಆಟಗಾರರ ಸ್ಪರ್ಧೆಗೆ ಸೆಟ್ ಮಾಡಿ ಇರಿಸಿದ್ದ ಚೆಸ್‌ಬೋರ್ಡ್‌ಗಳಲ್ಲಿ ತನ್ನ ಪ್ರತಿಸ್ಪರ್ಧಿ ಆಡಲಿದ್ದ ಚೆಸ್‌ಬೋರ್ಡ್‌ಗೆ ಪಾದರಸ ಹಾಕಿ ಕ್ಷಣಗಳಲ್ಲಿ ಅಲ್ಲಿಂದ ಹೊರಗೆ ಹೋಗುವುದನ್ನು ಕಾಣಬಹುದು. ಈ ಇಡೀ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಹೀಗೆ ಚದುರಂಗದಲ್ಲಿ ಮೋಸದಾಟ ಮಾಡಲು ಬಯಸಿ ಪ್ರತಿಸ್ಪರ್ಧಿಯ ಜೀವಕ್ಕೆ ಎರವಾದ ಚೆಸ್ ಆಟಗಾರ್ತಿಯನ್ನು ಅಮಿನಾ ಅಬಕರೊವಾ ಎಂದು ಗುರುತಿಸಲಾಗಿದೆ. ಇನ್ನು ಹೀಗೆ ಈಕೆ ವಿಷಪ್ರಾಸನ ಮಾಡಿದ್ದು, ಆಕೆಯ ಬಾಲ್ಯದ ವಿರೋಧಿ ಉಮಯ್‌ಗನತ್ ಒಸ್ಮನೊವಾ ಎಂಬಾಕೆಗೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ಅಮಿನಾ ಅಬಕರೊವಾಳನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ರಷ್ಯನ್ ರಿಪಬ್ಲಿಕ್ ಆದ ಡಗೇಸ್ತಾನ್‌ನಲ್ಲಿ ಈ ಚೆಸ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಆದರೆ ಈ ಸ್ಪರ್ಧೆಯಲ್ಲಿ ಆಟಗಾರ್ತಿ ಅಮಿನಾ ಅಬಕರೊವಾ ಸ್ಪರ್ಧೆ ಆರಂಭವಾಗುವುದಕ್ಕೆ ಮೊದಲು ತನ್ನ ಪ್ರತಿಸ್ಪರ್ಧಿಗೆ ನಿಗದಿಯಾಗಿದ್ದ ಚೆಸ್ ಟೇಬಲ್ ಮೇಲೆ ಪಾದರಸ ಹಾಕಿದ ನಂತರ ಅಲ್ಲಿನ ಸ್ಥಿತಿ ನಾಟಕೀಯ ತಿರುವು ಪಡೆಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ UNITED24 Media ಪೋಸ್ಟ್ ಮಾಡಿದೆ.

