ದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಕದ್ದ ಇಬ್ಬರನ್ನು ಕೇಂದ್ರ ತನಿಖಾ ದಳ ಮಂಗಳವಾರ ಬಂಧಿಸಿದೆ. ಬಂಧಿತರಲ್ಲಿ ಒಬ್ಬರು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಟ್ರಂಕ್‌ನಿಂದ NEET-UG ಪೇಪರ್ ಅನ್ನು ಕದ್ದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಬಂಧಿತರನ್ನು ಪಾಟ್ನಾದ ಪಂಕಜ್ ಕುಮಾರ್ ಮತ್ತು ಹಜಾರಿಬಾಗ್‌ನ ರಾಜು ಸಿಂಗ್ ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ. ಪ್ರಶ್ನೆ ಪತ್ರಿಕೆಯನ್ನು ಕದ್ದು ಹಂಚುವಲ್ಲಿ ಇಬ್ಬರೂ ಭಾಗಿಯಾಗಿದ್ದರು. ಈ ತಿಂಗಳ ಆರಂಭದಲ್ಲಿ ಸಿಬಿಐ ಪ್ರಮುಖ ಆರೋಪಿ ರಾಕೇಶ್ ರಂಜನ್ ಅಲಿಯಾಸ್ ರಾಕಿಯನ್ನು ಬಿಹಾರದ ನಳಂದಾದಲ್ಲಿ ಬಂಧಿಸಿತ್ತು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಕೇಶ್ ರಂಜನ್ ಪ್ರಮುಖರು ಎಂದು ನಂಬಲಾಗಿದೆ. ರಂಜನ್ ನನ್ನು ಬಂಧಿಸಲು ಸಿಬಿಐ ಬಲೆ ಬೀಸಿ ಪಾಟ್ನಾ ಮತ್ತು ಕೋಲ್ಕತ್ತಾದ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿತು. ಪ್ರಸ್ತುತ ಪ್ರಕರಣದಲ್ಲಿ ತನಿಖಾ ಸಂಸ್ಥೆ ಇದುವರೆಗೆ ಹನ್ನೆರಡು ಜನರನ್ನು ಬಂಧಿಸಿದೆ.