ತಿರುವನಂತಪುರಂ: ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಹಿನ್ನೆಲೆಯಲ್ಲಿ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಲಯಾಳಂ ನಟ ಸಿದ್ದಿಕ್‌ ರಾಜೀನಾಮೆ ನೀಡಿದ್ದಾರೆ.

ಅಧಿಕೃತವಾಗಿ ತಮ ರಾಜೀನಾಮೆಯನ್ನು ಸಂಘದ ಅಧ್ಯಕ್ಷ ಮೋಹನ್‌ ಲಾಲ್‌ ಅವರಿಗೆ ಸಲ್ಲಿಸಿದ್ದಾರೆ. ನಾನು ನನ್ನ ಅಧಿಕೃತ ರಾಜೀನಾಮೆಯನ್ನು ಸಂಸ್ಥೆಯ ಅಧ್ಯಕ್ಷ ಮೋಹನ್‌ಲಾಲ್‌ಗೆ ಸಲ್ಲಿಸಿದ್ದೇನೆ. ನನ್ನ ವಿರುದ್ಧ ಆರೋಪಗಳಿರುವುದರಿಂದ, ನಾನು ಹುದ್ದೆಯಲ್ಲಿ ಮುಂದುವರಿಯದಿರಲು ನಿರ್ಧರಿಸಿ ರಾಜೀನಾಮೆ ನೀಡಿದ್ದೇನೆ ಎಂದು ಸಿದ್ದಿಕ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲೆಯಾಳಂನ ಖ್ಯಾತ ನಿರ್ದೇಶಕ ಹಾಗೂ ಕೇರಳ ಚಲಚಿತ್ರ ಅಕಾಡೆಮಿಯ ಅಧ್ಯಕ್ಷ ರಂಜಿತ್‌ ತಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಆರೋಪ ಮಾಡಿದ್ದರು.

2019ರಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ಈಗ ಮತ್ತೆ ಈ ವಿಚಾರ ಎತ್ತಿದ್ದು, ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ರಂಜಿತ್‌ ಜೊತೆ ಮುಂದಿನ ಚಿತ್ರದ ಕುರಿತು ಮಾತುಕತೆ ನಡೆಸಲು ಅವರ ನಿವಾಸಕ್ಕೆ ಹೋಗಿದ್ದೆ. ಈ ವೇಳೆ ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಅದು ನನಗೆ ಇಷ್ಟವಾಗಲಿಲ್ಲ. ಆದ್ದರಿಂದಾಗಿ ನಾನು ಅವರ ಮುಂದಿನ ಯೋಜನೆಯ ಭಾಗವಾಗಲು ಬಯಸುವುದಿಲ್ಲ ಎಂದು ಹೇಳಿ ಕೋಲ್ಕತಾಗೆ ಮರಳಿದೆ ಎಂದು ಹೇಳಿದ್ದಾರೆ.