ಬಿಹಾರ: ಅಂಬೆಗಾಲಿಡುವ ಮಗುವೊಂದು ಹಾವನ್ನು ಕಚ್ಚಿ ಕೊಂದಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಜಮುಹರ್ ಗ್ರಾಮದಲ್ಲಿ ನಡೆದಿದೆ.
ಮಗು ಅಪಾಯದಿಂದ ಪಾರಾಗಿದ್ದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಸಾಕಷ್ಟು ಮಂದಿ ಮಗುವನ್ನು ಕಾಣಲು ಬರುತ್ತಿದ್ದಾರೆ ಎನ್ನಲಾಗಿದೆ.
ಮಗು ಟೆರೇಸ್‌ನಲ್ಲಿ ಆಟವಾಡುತ್ತಿದ್ದಾಗ ಹಾವನ್ನು ಕಂಡು ಆಟವಾಡುವ ಸಾಮಗ್ರಿ ಎಂದು ತಿಳಿದು ಕಚ್ಚಿದೆ. ಹಾವು ಸಾವನ್ನಪ್ಪಿದ್ದು, ಬಾಲಕ ಅಪಾಯದಿಂದ ಪಾರಾಗಿರುವುದು ಆತನ ಕುಟುಂಬ ಹಾಗೂ ವೈದ್ಯರಿಗೆ ಅಚ್ಚರಿ ಮೂಡಿಸಿದೆ.
ಮಗು ಹಾವನ್ನು ಜಗಿಯುತ್ತಿರುವುದನ್ನು ಕಂಡ ಕೂಡಲೇ ತಾಯಿ ಅದನ್ನು ಮಗುವಿನ ಬಾಯಿಯಿಂದ ತೆಗೆದು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿ ಮಗುವನ್ನು ಪರೀಕ್ಷಿಸಿ ದೈಹಿಕವಾಗಿ ಯಾವುದೇ ಹಾನಿಯಿಲ್ಲ ಎಂದು ದೃಢಪಡಿಸಿ, ಮಗು ಆರೋಗ್ಯವಾಗಿರುವುದಾಗಿ ಘೋಷಿಸಿದರು.
ಈ ಹಾವು ವಿಷಕಾರಿಯಲ್ಲ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ಅವರು ಹೇಳಿದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.

