ಸಂಬಾಲ್ಪುರ: 19 ವರ್ಷದ ಯುವತಿಯೊಬ್ಬಳ ತಲೆ ಹೊಕ್ಕಿದ್ದ 70ಕ್ಕೂ ಹೆಚ್ಚು ಸೂಜಿಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ಘಟನೆ ಒಡಿಶಾದಲ್ಲಿ ನಡೆದಿದೆ.ಒಡಿಶಾದ ಸಂಬಾಲ್ಪುರ ಜಿಲ್ಲೆಯ ವಿಮ್ಸರ್ ವೈದ್ಯಕೀಯ ಕಾಲೇಜಿನ ವೈದ್ಯರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ನಡೆಸಿ ಯುವತಿಯ ತಲೆ ಸೇರಿದ್ದ ಸೂಜಿಗಳನ್ನು ಹೊರತೆಗೆದಿದ್ದಾರೆ.

ಸೂಜಿಗಳು ಯುವತಿಯ ತಲೆ ಸೇರಿದ್ದು ಹೇಗೆ?
ಇಂಚಗಾವ್‌ನ ರೇಷ್ಮಾ ಬೆಹ್ರಾ ಎಂಬ 19 ವರ್ಷದ ಯುವತಿಗೆ ನಾಲ್ಕು ವರ್ಷದ ಹಿಂದಿನಿಂದಲೂ ಆರೋಗ್ಯ ಸಮಸ್ಯೆ ಇತ್ತು. ಈ ಹಿನ್ನೆಲೆಯಲ್ಲಿ ಆಕೆಯ ಮನೆಯವರು ಆಕೆಯನ್ನು ಒಬ್ಬರ ವೈದ್ಯರ ಬಳಿ ಕರೆದೊಯ್ದಿದ್ದರು. ಆ ಹಳ್ಳಿ ವೈದ್ಯ ಈಕೆಯ ಆರೋಗ್ಯ ಸಮಸ್ಯೆಯ ಪರಿಹಾರಕ್ಕಾಗಿ ಹೀಗೆ ತಲೆಗೆ ಸೂಜಿಗಳನ್ನು ಮೊಳೆಯಂತೆ ಹೊಡೆದಿದ್ದ ಎನ್ನಲಾಗಿದೆ. ನಂತರ ನಿಧಾನವಾಗಿ ತಲೆನೋವಾಗಲು ಶುವವಾಗಿದ್ದು ಬಳಿಕ ತೀವ್ರವಾಗಿದೆ.

ಪೋಷಕರು ಯುವತಿಯನ್ನು ವಿಮ್ಸರ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ನಿರ್ದೇಶಕ, ಬಿ. ರಥ್ ಎಂಬುವವರು ಮಾತನಾಡಿ, ರಾತ್ರಿ 2 ಗಂಟೆಗೆ ಶಸ್ತ್ರಚಿಕಿತ್ಸೆ ಶುರು ಮಾಡಿದೆವು ಇದು ಸುಮಾರು ಒಂದೂವರೆ ಗಂಟೆಗಳ ಕಾಲ ಮುಂದುವರೆಯಿತು. ನಮ್ಮ ಮೂವರು ಶಸ್ತ್ರಚಿಕಿತ್ಸಾ ವಿಶೇಷತಜ್ಞರು ಈ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ಭಾಗಿಯಾದರು. ಅದೃಷ್ಟವಶಾತ್ ಒಂದೇ ಒಂದು ಸೂಜಿಯೂ ಆಕೆಯ ತಲೆ ಬುರುಡೆಯನ್ನು ಸೀಳಿರಲಿಲ್ಲ, ಹಾಗೂ ಯಾವುದೇ ಸೋಂಕುಆಗಿರಲಿಲ್ಲ, ಯುವತಿಯೂ ಈಗ ಅಪಾಯದಿಂದ ಪಾರಾಗಿದ್ದಾಳೆ, ಆದರೂ ಕನಿಷ್ಠ ಒಂದು ವಾರದ ಮಟ್ಟಿಗಾದರೂ ಆಕೆಯನ್ನು ಸೂಕ್ಷ್ಮವಾಗಿ ಗಮನಿಸಲು ಆಸ್ಪತ್ರೆಯಲ್ಲೇ ಉಳಿಸಲಾಗಿದೆ ಎಂದಿದ್ದಾರೆ.