ಮುಂಬೈ: ಯುವರಾಜ್ ಸಿಂಗ್ ತಂದೆ ಹಾಗೂ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಮತ್ತೊಮ್ಮೆ 2011ರ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಕಿಡಿಕಾರಿದ್ದಾರೆ. ಯೋಗರಾಜ್ ಸಾರ್ವಜನಿಕ ವೇದಿಕೆಗಳಲ್ಲಿ ಧೋನಿ ಬಗ್ಗೆ ಆಗಾಗ ಟೀಕೆ ಮಾಡುತ್ತಲೇ ಬಂದಿದ್ದಾರೆ.

ಜೀ ಸ್ವಿಚ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯೋಗರಾಜ್ ಅವರು, ಯುವರಾಜ್ ಅವರ ವೃತ್ತಿಜೀವನ ನಾಶಮಾಡಲು ಧೋನಿಯವರೇ ಪ್ರಮುಖ ಕಾರಣ ಮತ್ತು ನಾನು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು. “ನಾನು ಎಂ.ಎಸ್ ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ, ಅವರು ಕನ್ನಡಿಯಲ್ಲಿ ಅವರ ಮುಖವನ್ನು ನೋಡಬೇಕು, ಅವರು ತುಂಬಾ ದೊಡ್ಡ ಕ್ರಿಕೆಟಿಗ, ಆದರೆ ಅವರು ನನ್ನ ಮಗನ ವಿರುದ್ಧ ಏನು ಮಾಡಿದ್ದಾರೆ ಎಂಬುದು ಎಲ್ಲವೂ ಈಗ ಹೊರಬರುತ್ತಿದೆ. ಅದನ್ನು ಜೀವನದಲ್ಲಿ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ”.

ನಾನು ಜೀವನದಲ್ಲಿ ಎರಡು ಕೆಲಸಗಳನ್ನು ಮಾಡಿಲ್ಲ ಮೊದಲನೆಯದು ನನಗೆ ತಪ್ಪು ಮಾಡಿದ ಯಾರನ್ನೂ ನಾನು ಕ್ಷಮಿಸಿಲ್ಲ ಮತ್ತು ಎರಡನೆಯದು ನನ್ನ ಕುಟುಂಬ ಸದಸ್ಯರಾಗಲಿ ಅಥವಾ ನನ್ನ ಮಕ್ಕಳಾಗಲಿ ನಾನು ಅವರನ್ನು ನನ್ನ ಜೀವನದಲ್ಲಿ ಎಂದಿಗೂ ತಬ್ಬಿಕೊಂಡಿಲ್ಲ ಎಂದು ಯೋಗರಾಜ್ ಝೀ ಜೊತೆ ಮಾತನಾಡುತ್ತಾ ಹೇಳಿದರು. ಯುವರಾಜ್ ಇನ್ನೂ 4-5 ವರ್ಷಗಳ ಕಾಲ ತಂಡದಲ್ಲಿ ಸುಲಭವಾಗಿ ಆಡಬಹುದಿತ್ತು ಆದ್ರೆ ಧೋನಿಯವರಿಂದ ಅವರು ನಿವೃತ್ತಿ ತೆಗೆದುಕೊಳ್ಳಬೇಕಾಯಿತು ಎಂದು ದೂಷಿಸಿದರು.

ಇನ್ನು ನಾಲ್ಕೈದು ವರ್ಷ ಆಡಬಹುದಾಗಿದ್ದ ನನ್ನ ಮಗನ ಕ್ರಿಕೆಟ್ ವೃತ್ತಿ ಜೀವನವನ್ನು ಆ ವ್ಯಕ್ತಿ (ಎಂಎಸ್ ಧೋನಿ) ನಾಶಪಡಿಸಿದ್ದಾನೆ. ಯುವರಾಜ್‌ನಂತಹ ಮಗನಿಗೆ ಜನ್ಮ ನೀಡಲು ನಾನು ಎಲ್ಲರಿಗೂ ಧೈರ್ಯ ನೀಡುತ್ತೇನೆ. ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ರಂತಹ ಹಿರಿಯ ಆಟಗಾರರು ಕೂಡ ಈ ಹಿಂದೆ ಮತ್ತೊಬ್ಬ ಯುವರಾಜ್ ಸಿಂಗ್ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಕ್ಯಾನ್ಸರ್ ಇಟ್ಟುಕೊಂಡು ದೇಶಕ್ಕಾಗಿ ಆಡಿರುವ ಯುವರಾಜ್‌ ಸಿಂಗ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಯೋಗರಾಜ್ ಹೇಳಿದರು.