ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2025ರ ಫೈನಲ್​ ಪಂದ್ಯಕ್ಕೆ ದಿನಾಂಕ ನಿಗದಿಯಾಗಿದೆ. ಅದರಂತೆ ಮುಂದಿನ ವರ್ಷ ಜೂನ್ 11 ರಿಂದ 15 ರವರಗೆ WTC ಫೈನಲ್ ಪಂದ್ಯ ಜರುಗಲಿದೆ.

ಈ ಪಂದ್ಯಕ್ಕೆ ಇಂಗ್ಲೆಂಡ್​ನ ಲಾರ್ಡ್ಸ್ ಮೈದಾನ ಆತಿಥ್ಯವಹಿಸಲಿದೆ. ಇದಕ್ಕೂ ಮುನ್ನ ನಡೆದ 2021ರ ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಗಳಿಗೆ ಇಂಗ್ಲೆಂಡ್​ನ ಓವಲ್ ಮೈದಾನ ಆತಿಥ್ಯವಹಿಸಿತ್ತು. ಈ ಬಾರಿ ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಅಂತಿಮ ಹಣಾಹಣಿಯನ್ನು ಆಯೋಜಿಸಲು ಐಸಿಸಿ ನಿರ್ಧರಿಸಿದೆ.

ಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ ಅಥವಾ ಇನ್ನಿತರ ಕಾರಣಗಳಿಂದ ದಿನದಾಟ ನಡೆಯದಿದ್ದರೆ ಮೀಸಲು ದಿನದಾಟದ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಇದಕ್ಕಾಗಿ ಜೂನ್ 16 ಮೀಸಲು ದಿನವಾಗಿ ಘೋಷಿಸಲಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುವ ತಂಡಗಳಾವುವು ಎಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಪ್ರಸ್ತುತ WTC ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದೆ. ಹಾಗೆಯೇ ಆಸ್ಟ್ರೇಲಿಯಾ ತಂಡ ದ್ವಿತೀಯ ಸ್ಥಾನದಲ್ಲಿದೆ. ಇನ್ನು ನ್ಯೂಝಿಲೆಂಡ್ ತಂಡ ಮೂರನೇ ಸ್ಥಾನದಲ್ಲಿದರೆ, ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೇರಿದೆ.

ಇಲ್ಲಿ ಭಾರತ ತಂಡವು ಬಾಂಗ್ಲಾದೇಶ್ ಹಾಗೂ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿಕೊಂಡರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರುವುದು ಖಚಿತವಾಗಲಿದೆ. ಅತ್ತ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಫೈನಲ್​ಗೇರುವ ಅವಕಾಶವನ್ನು ಹೊಂದಿದೆ.

ಮೂರನೇ ಸ್ಥಾನದಲ್ಲಿರುವ ನ್ಯೂಝಿಲೆಂಡ್ ಭಾರತ ತಂಡವನ್ನು ಮುಂದಿನ ಟೆಸ್ಟ್ ಸರಣಿಯಲ್ಲಿ ಸೋಲಿಸಿದ ಎರಡನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ. ಹಾಗೆಯೇ ಇದೀಗ ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡವು ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ವಿರುದ್ಧದ ಸರಣಿಗಳಲ್ಲಿ ಅಮೋಘ ಗೆಲುವು ಸಾಧಿಸಿದರೆ ಫೈನಲ್​ಗೇರಬಹುದು.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಟೀಮ್ ಇಂಡಿಯಾ ಫೈನಲ್​ಗೇರಲು ಉತ್ತಮ ಅವಕಾಶವಿದೆ. ಏಕೆಂದರೆ ಭಾರತ ತಂಡವು ಮುಂದಿನ 2 ಟೆಸ್ಟ್ ಸರಣಿಗಳನ್ನು ಆಡುತ್ತಿರುವುದು ತವರಿನಲ್ಲಿ. ಅಂದರೆ ಬಾಂಗ್ಲಾದೇಶ್ ವಿರುದ್ಧ ಭಾರತ ತಂಡವು 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಾದ ಬಳಿಕ ನ್ಯೂಝಿಲೆಂಡ್ ವಿರುದ್ಧ ಕೂಡ ಭಾರತದಲ್ಲೇ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.