ಲಂಡನ್: ಆರೂ ಪಂದ್ಯಗಳನ್ನು ಗೆದ್ದ ಅಜೇಯ ಸಾಧನೆಯೊಂದಿಗೆ ವನಿತಾ ಟಿ20 ವಿಶ್ವಕಪ್ ಫೈನಲಿಗೆ ಲಗ್ಗೆ ಹಾಕಿರುವ ಆಸ್ಟ್ರೇಲಿಯ ಮತ್ತು ಆತಿಥೇಯ ಇಂಗ್ಲೆಂಡ್ ತಂಡಗಳು ರವಿವಾರ ಲಾರ್ಡ್ಸ್ ಅಂಗಳದಲ್ಲಿ ಪ್ರಶಸ್ತಿ ಪೈಪೋಟಿಗೆ ಇಳಿಯಲಿವೆ.
ಇದು ಸಾಂಪ್ರದಾಯಿಕ ತಂಡಗಳೆರಡರ ನಡುವಿನ ಕದನ. ಈವರೆಗೆ ಸರ್ವಾಧಿಕ 6 ಸಲ ಚಾಂಪಿಯನ್ ಆಗಿರುವ ಆಸ್ಟ್ರೇಲಿಯ, ಈ ಸಲವೂ ನೆಚ್ಚಿನ ತಂಡ. ಆಸ್ಟ್ರೇಲಿಯವನ್ನು ಮಣಿಸಿದವರಿಗೆ ಕಪ್ ಎಂಬುದು ಪ್ರತೀ ಕೂಟದಲ್ಲೂ ಚಾಲ್ತಿಯಲ್ಲಿರುವ ಮಾತು. ಈ ಸಲವೂ ಈ ಸಾಲಿಗೆ ಬೆಲೆ ಇದೆ.
ಇಂಗ್ಲೆಂಡ್ 2009ರ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆದುದನ್ನು ಬಿಟ್ಟರೆ ಮತ್ತೆಂದೂ ಕಪ್ ಎತ್ತಿಲ್ಲ. ಫೈನಲ್ ನಲ್ಲಿ ಆಸ್ಟ್ರೇಲಿಯಕ್ಕೆ 3 ಸಲ ಸೋತಿದೆ. ಆದರೆ ಈ ಬಾರಿ ತವರಿನಲ್ಲಿ ಹೆಚ್ಚು ಬಲಿಷ್ಠವಾಗಿ ಗೋಚರಿಸಿರುವುದರಿಂದ ಕಾಂಗರೂ ಪಡೆಯನ್ನು ಬುಡಮೇಲು ಮಾಡಬಹುದೆಂಬ ನಿರೀಕ್ಷೆಯಂತೂ ಇದೆ.

