ಮಹಿಳೆಯರ ಟಿ20 ಏಷ್ಯಾಕಪ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಪಂದ್ಯಾವಳಿಯು ಜುಲೈ 19 ರಿಂದ ಶ್ರೀಲಂಕಾದ ದಂಬುಲ್ಲಾದಲ್ಲಿ ಪ್ರಾರಂಭವಾಗಲಿದೆ.
ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ, ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಉಳಿದಂತೆ ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಬೇಕಾಗಿದ್ದು, ಇದಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಈ ಪಂದ್ಯಾವಳಿಯ ಬಗ್ಗೆ ದೊಡ್ಡ ಘೋಷಣೆ ಮಾಡಿದೆ.
ಈ ಟೂರ್ನಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲಾ ಪಂದ್ಯಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುವುದು ಮತ್ತು ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ನೀಡಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದರೆ ಭಾರತ-ಪಾಕಿಸ್ತಾನ ನಡುವೆ ನಡೆಯುವ ಪಂದ್ಯವನ್ನು ಅಭಿಮಾನಿಗಳು ಮೈದಾನಕ್ಕೆ ಹೋಗಿ ಅದೂ ಕೂಡ ಉಚಿತವಾಗಿ ವೀಕ್ಷಿಸಬಹುದು, ಅಪರೂಪಕ್ಕೆಂಬಂತೆ. ಈ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಸೇರಿದಂತೆ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳನ್ನು ಆಡಲಾಗುವುದು.

