ಡಂಬುಲ: ಏಷ್ಯಾದಲ್ಲಿ ವನಿತೆಯರ ಕ್ರಿಕೆಟ್ ಪ್ರಭುತ್ವವನ್ನು ಸಾರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾ ವಳಿ ಶುಕ್ರವಾರ ಶ್ರೀಲಂಕಾ ಆತಿಥ್ಯದಲ್ಲಿ ಆರಂಭವಾಗಲಿದೆ. 8 ತಂಡಗಳು ಭಾಗವಹಿಸಲಿದ್ದು, ಎಲ್ಲ ಪಂದ್ಯಗಳು ಡಂಬುಲದಲ್ಲಿ ನಡೆಯಲಿವೆ. ಭಾರತ- ಪಾಕಿಸ್ಥಾನ ಆರಂಭದಲ್ಲೇ ಮುಖಾ ಮುಖಿ ಆಗುವ ಮೂಲಕ ಕೂಟದ ರೋಮಾಂಚನಗೊಳ್ಳಲಿದೆ.
ಉದ್ಘಾಟನ ಪಂದ್ಯದಲ್ಲಿ ಯುಎಇ- ನೇಪಾಲ ಎದುರಾಗಲಿವೆ. ಏಷ್ಯಾ ಕಪ್ ಅಂದರೆ ಅದು ಭಾರತೀಯ ನಾರಿಯರ ಸ್ವತ್ತು ಎಂಬಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದೆ. ಈವರೆಗಿನ 8 ಏಷ್ಯಾ ಕಪ್ ಕೂಟಗಳಲ್ಲಿ 7 ಸಲ ಚಾಂಪಿಯನ್ ಆಗಿ ಮೂಡಿ ಬಂದಿರುವುದೇ ಇದಕ್ಕೆ ಸಾಕ್ಷಿ. ಇದ ರಲ್ಲಿ ಏಕದಿನ ಮಾದರಿಯ ಎಲ್ಲ 4 ಪಂದ್ಯಾವಳಿಗಳಲ್ಲೂ ಭಾರತವೇ ಪ್ರಶಸ್ತಿ ಎತ್ತಿತ್ತು. ಹಾಗೆಯೇ 4 ಟಿ20 ಮಾದರಿಗಳ ಟೂರ್ನಿಯ ವೇಳೆ ಮೂರರಲ್ಲಿ ಚಾಂಪಿಯನ್ ಆಗಿತ್ತು. ಒಮ್ಮೆ ಮಾತ್ರ ಬಾಂಗ್ಲಾದೇಶ ವಿರುದ್ಧ ಪ್ರಶಸ್ತಿ ಸಮರದಲ್ಲಿ ಸೋಲು ಕಂಡಿತ್ತು. ಅರ್ಥಾತ್, ಈವರೆಗಿನ ಎಲ್ಲ 8 ಕೂಟಗಳಲ್ಲೂ ಭಾರತ ಫೈನಲ್ ತಲುಪಿತ್ತು.
ಏಷ್ಯಾ ಕಪ್ ಟಿ20 ಮಾದರಿಯಲ್ಲಿ ಆಡಿದ 20 ಪಂದ್ಯಗಳಲ್ಲಿ ಭಾರತ 17ರಲ್ಲಿ ಜಯಭೇರಿ ಮೊಳಗಿಸಿದೆ. 2022ರ ಕೂಟದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಪಾಕಿಸ್ಥಾನ ವಿರುದ್ಧವೂ ಭಾರತದ ದಾಖಲೆ ಅಮೋಘ ಮಟ್ಟದಲ್ಲಿದೆ. 14 ಟಿ20 ಪಂದ್ಯಗಳಲ್ಲಿ 11ರಲ್ಲಿ ಗೆಲುವು ಸಾಧಿಸಿದೆ. ಏಷ್ಯಾ ಕಪ್‌ನಲ್ಲಿ ಒಟ್ಟು 6 ಸಲ ಮುಖಾಮುಖೀಯಾಗಿದ್ದು, ಭಾರತ ಐದನ್ನು ಗೆದ್ದಿದೆ.

