ದಾಂಬುಲಾ: 9ನೇ ಆವೃತ್ತಿ ಮಹಿಳಾ ಏಷ್ಯಾಕಪ್‌ ಟೂರ್ನಿಯಲ್ಲಿ ನೇಪಾಳ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.ಬುಧವಾರ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಭಾರತ ತಂಡ ನೇಪಾಳ ವಿರುದ್ಧ 82 ರನ್‌ ಜಯಭೇರಿ ಬಾರಿಸಿತು. ಇದರೊಂದಿಗೆ ನೇಪಾಳ ಗುಂಪು ಹಂತದಲ್ಲೇ ಹೊರಬಿತ್ತು.

ಮೊದಲು ಬ್ಯಾಟ್‌ ಮಾಡಿದ ಭಾರತ 3 ವಿಕೆಟ್‌ಗೆ 178 ರನ್‌ ಗಳಿಸಿತು. ಶಫಾಲಿ ವರ್ಮಾ 48 ಎಸೆತಗಳಲ್ಲಿ 81 ರನ್‌ ಸಿಡಿಸಿದರೆ, ದಯಾಳನ್‌ ಹೇಮಲತಾ 47, ಜೆಮಿಮಾ ರೋಡ್ರಿಗ್ಸ್‌ 28 ರನ್‌ ಗಳಿಸಿದರು.ದೊಡ್ಡ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ ಕೇವಲ 96 ರನ್ ಗಳಿಸಿ ಸೋಲೊಪ್ಪಿಕೊಂಡಿತು. 2ನೇ ಓವರ್‌ನಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ ಬಳಿಕ ಚೇತರಿಸಿಕೊಳ್ಳಲಿಲ್ಲ. ದೀಪ್ತಿ ಶರ್ಮಾ 3 ವಿಕೆಟ್ ಕಬಳಿಸಿದರು.

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ಹೊರತಾಗಿಯೂ ಬಳಿಕ ಸತತ 2 ಪಂದ್ಯ ಗೆದ್ದ ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸಿದೆ.