2024 ರ ಮಹಿಳೆಯರ ಏಷ್ಯಾಕಪ್ ಇಂದಿನಿಂದ ಶ್ರೀಲಂಕಾದ ಆತಿಥ್ಯದಲ್ಲಿ ಆರಂಭವಾಗಿದೆ. ಟೂರ್ನಿಯ ಮೊದಲ ಪಂದ್ಯ ಎ ಗುಂಪಿನ ನೇಪಾಳ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ನಡೆಯಿತು.

ಈ ಪಂದ್ಯದಲ್ಲಿ ನೇಪಾಳ ತಂಡ ಯುಎಇ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. ವಾಸ್ತವವಾಗಿ ಮಹಿಳೆಯರ ಏಷ್ಯಾಕಪ್ ಇತಿಹಾಸದಲ್ಲಿ ಇದು ನೇಪಾಳ ತಂಡದ ಮೊದಲ ಗೆಲುವಾಗಿದೆ.

ದಂಬುಲಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೇಪಾಳ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಇ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 115 ರನ್ ಗಳಿಸಿತು. ಉತ್ತರವಾಗಿ ನೇಪಾಳ 16.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 118 ರನ್ ಬಾರಿಸಿ ಆರು ವಿಕೆಟ್‌ಗಳ ಜಯ ಸಾಧಿಸಿತು.