ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ಏಷ್ಯಾಕಪ್‌ನಲ್ಲಿ ಭಾರತ ವನಿತಾ ಪಡೆ ಇಂದು ತನ್ನ ಎರಡನೇ ಪಂದ್ಯವನ್ನು ಆಡುತ್ತಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ್ದ ಟೀಂ ಇಂಡಿಯಾ, ಇದೀಗ ಎರಡನೇ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಪಡೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ದಾಖಲೆಯ 201 ರನ್ ಕಲೆಹಾಕಿತು. ಇದು ಮಹಿಳಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಕಲೆಹಾಕಿದ ಅತಿ ದೊಡ್ಡ ಮೊತ್ತವಾಗಿದೆ. ಅಲ್ಲದೆ ಮಹಿಳಾ ಏಷ್ಯಾಕಪ್‌ನಲ್ಲೂ ಮೊದಲ ಬಾರಿಗೆ ದ್ವಿಶತಕದ ಗಡಿ ದಾಟಿದ ದಾಖಲೆಯನ್ನು ಟೀಂ ಇಂಡಿಯಾ ಸೃಷ್ಟಿಸಿದೆ.
ಇನ್ನು ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಟಿ20 ಏಷ್ಯಾಕಪ್ನ 5ನೇ ಪಂದ್ಯದಲ್ಲಿ ಯುಎಇ ಮಹಿಳಾ ತಂಡವನ್ನು 78 ರನ್ಗಳಿಂದ ಮಣಿಸಿದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
ಭಾರತ ನೀಡಿದ 202 ರನ್‌ಗಳ ಗುರಿ ಬೆನ್ನಟ್ಟಿದ ಯುಎಇ ತಂಡದ ಯಾವ ಬ್ಯಾಟರ್ಗೂ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಇಡೀ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 123 ರನ್ ಗಳಿಸಲಷ್ಟೇ ಶಕ್ತವಾಯಿತು. ಕವಿಶ ಆಗೋಡೆಗೆ ತಂಡದ ಪರ ಹೆಚ್ಚಿನ ರನ್ ಗಳಿಸಿದರು. ಅವರು 32 ಎಸೆತಗಳಲ್ಲಿ 40 ರನ್‌ಗಳ ಇನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿ ನಾಯಕಿ ಇಶಾ ರೋಹಿತ್ ಓಜಾ 36 ಎಸೆತಗಳಲ್ಲಿ 38 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ ಅತ್ಯಧಿಕ ಎರಡು ವಿಕೆಟ್ ಪಡೆದರು. ಇವರಲ್ಲದೆ ರೇಣುಕಾ ಠಾಕೂರ್ ಸಿಂಗ್, ತನುಜಾ ಕನ್ವರ್, ಪೂಜಾ ವಸ್ತ್ರಾಕರ್, ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.

