ಮಂಗಳೂರು: ಭಾರತ ಪಾಕಿಸ್ತಾನ ನಡುವೆ ಭಾನುವಾರ ಟಿ20 ವಿಶ್ವಕಪ್​ನ ಹೈವೋಲ್ಟೇಜ್ ಪಂದ್ಯ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಬಗ್ಗೆ ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್  ಪ್ರತಿಕ್ರಿಯಿಸಿದ್ದು, ಪಾಕಿಸ್ತಾನದ ಜೊತೆ ನಾವು ಕ್ರಿಕೆಟ್ ಆಟ ಆಡಲೇಬಾರದು ಎಂದಿದ್ದಾರೆ.

ಅವರು, ಟಿ20 ಮ್ಯಾಚ್ ನಡೆಯುತ್ತಿರುವುದು ಎಲ್ಲರಿಗೂ ಸಂತೋಷದ ವಿಚಾರ. ನಾನು ಸಹ ಕ್ರಿಕೆಟ್ ಆಟಗಾರ ಮತ್ತು ಅಭಿಮಾನಿ. ಅದಕ್ಕಿಂತ ಮಿಗಿಲಾಗಿ ನಾನು ಭಾರತ ದೇಶದ ಪ್ರಜೆ ಎಂದಿದ್ದಾರೆ.

ನಾವು ಪಾಕಿಸ್ತಾನದ ಜೊತೆ ಕ್ರಿಕೆಟ್ ಆಟ ಆಡಲೇಬಾರದು. ಪಾಕಿಸ್ತಾನದವರು ಇಲ್ಲಿ ಬಂದಾಗ ವಿರೋಧಿಸಿದ್ದನ್ನು ನೋಡಿದ್ದೇವೆ. ಭಾರತ ದೇಶದಲ್ಲಿ ಅವರ ಜತೆ ಪಂದ್ಯ ಬ್ಯಾನ್ ಮಾಡಲಾಗಿದೆ.

ಹಾಗಾದ ಮೇಲೆ ಹೊರದೇಶದಲ್ಲಿ ಯಾಕೆ ಆಟ ಆಡಿಸಬೇಕು? ಅವರು ಸರಿಯಾಗುವ ತನಕ‌‌ ಅವರ ಜತೆ ಪಂದ್ಯ ಆಡುವುದೇ ಬೇಡ. ಇದು ನನ್ನ ವೈಯಕ್ತಿಕ ಅಂತರಾಳದ ಅನಿಸಿಕೆ ಎಂದು ಅವರು ಹೇಳಿದರು.

ಒಂದು ವೇಳೆ ಬಾಂಧವ್ಯ ಸರಿಯಾಗಿದ್ದರೆ ಮತ್ತೆ ನಮ್ಮಲ್ಲಿ ಯಾಕೆ ಆಡುವುದಿಲ್ಲ? ಮ್ಯಾಚ್ ಆಯೋಜಿಸುವವರು ಈ ರೀತಿಯ ಗೊಂದಲ ಮಾಡಬಾರದು. ಈಗ ಆಟ ಆಡಲೇಬೇಕು ಎಂದು ನಿರ್ಧಾರವಾಗಿದೆ. ಭಾರತ ದೇಶ ಟಿ20 ವಿಶ್ವಕಪ್ ಗೆಲ್ಲಬೇಕು ಎಂದು ಅವರು ಆಶಿಸಿದರು.

ನಾಳೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನಮ್ಮ ಗೆಲವು ಕೇವಲ ಜಯವಷ್ಟೇ ಆಗಬಾರದು. ಅದು ಗೌರವದ ಗೆಲುವಾಗಬೇಕು. ಪಾಕಿಸ್ತಾನವನ್ನು ಸೋಲಿಸುವುದು ಮಾತ್ರವಲ್ಲ, ಅವರನ್ನು ಹೀನಾಯವಾಗಿ ಸೋಲಿಸಬೇಕು ಎಂದು ಖಾದರ್ ಹೇಳಿದರು.