ಮಂಗಳೂರು: ಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಎಸ್.ಜೆ.ಇ.ಸಿ) ಮಹಿಳಾ ಚೆಸ್ ತಂಡವು ತುಮಕೂರಿನ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಕ್ಟೋಬರ್ 27 ಮತ್ತು 28, 2026 ರಂದು ನಡೆದ ವಿಟಿಯು ರೆಸ್ಟ್ ಆಫ್ ಬೆಂಗಳೂರು ವಿಭಾಗ ಮಟ್ಟದ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ (ಪಿಇಡಿ) ವನೀಷಾ ರಾಡ್ರಿಗಸ್ ಹಾಗೂ ಸಹಾಯಕ ಪಿಇಡಿ ಸುಧೀರ್ ಎಂ. ಅವರ ಮಾರ್ಗದರ್ಶನದಲ್ಲಿ ತಂಡವು ಈ ಸಾಧನೆ ಮಾಡಿದೆ.

ಇದೇ ಚಾಂಪಿಯನ್ ಶಿಪ್ ನಲ್ಲಿ ಎಸ್.ಜೆ.ಇ.ಸಿ ಪುರುಷರ ಚೆಸ್ ತಂಡವೂ ಉತ್ತಮ ಪ್ರದರ್ಶನ ನೀಡಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಾಧನೆಯೊಂದಿಗೆ ಮಹಿಳಾ ಮತ್ತು ಪುರುಷರ ಎರಡೂ ತಂಡಗಳು ಅಕ್ಟೋಬರ್ 29 ಮತ್ತು 30, 2026 ರಂದು ತುಮಕೂರಿನ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಯಲಿರುವ ವಿಟಿಯು ರಾಜ್ಯಮಟ್ಟದ ಚೆಸ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದಿವೆ.
ವಿದ್ಯಾರ್ಥಿಗಳ ಕಾರ್ಯತಂತ್ರ ರೂಪಿಸುವ ಸಾಮರ್ಥ್ಯ, ಏಕಾಗ್ರತೆ, ಸ್ಪರ್ಧಾತ್ಮಕ ಮನೋಭಾವ ಮತ್ತು ಪರಿಶ್ರಮ ಈ ಸಾಧನೆಗೆ ಕಾರಣವಾಗಿದೆ. ಎರಡೂ ತಂಡಗಳ ಸಾಧನೆಯನ್ನು ಎಸ್.ಜೆ.ಇ.ಸಿ ಆಡಳಿತ ಮಂಡಳಿಯು ಅಭಿನಂದಿಸಿದ್ದು, ದೈಹಿಕ ಶಿಕ್ಷಣ ನಿರ್ದೇಶಕರಿಗೂ ಮೆಚ್ಚುಗೆ ವ್ಯಕ್ತಪಡಿಸಿದೆ. ಮುಂಬರುವ ರಾಜ್ಯಮಟ್ಟದ ಚಾಂಪಿಯನ್ಶಿಪ್ನಲ್ಲಿಯೂ ತಂಡಗಳು ಉತ್ತಮ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸಿದೆ.

