ದೆಹಲಿ: 2024ರ ಐಪಿಎಲ್ಗೆ ಮಾರ್ಚ್ 22ರಂದು ವರ್ಣರಂಜಿತ ಚಾಲನೆ ದೊರೆತ್ತಿದ್ದು, 17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ಕಿಂಗ್ಸ್ ಎದುರು ಸೋಲಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಭಿಯಾನವನ್ನು ಆರಂಭಿಸಿದೆ.
ಆದರೆ ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಉದ್ಘಾಟನಾ ಪಂದ್ಯದಲ್ಲೇ ವಿಶ್ವದಾಖಲೆ ಒಂದನ್ನು ಬರೆದಿದ್ದಾರೆ. ಈ ಮೂಲಕ ಟಿ-20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಪಿಎಲ್ ಮೂಲಕ ಬರೋಬ್ಬರಿ 2 ತಿಂಗಳ ನಂತರ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕಕ್ಕೆ ಮರಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೊಹ್ಲಿ 6 ರನ್ ಕಲೆಹಾಕಿದ ಕೂಡಲೇ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ಗಳ ಗಡಿ ದಾಟಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
360 ಟಿ-20 ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ವಿಶ್ವದ ಆರನೇ ಬ್ಯಾಟ್ಸ್ಮನ್ ಆಗಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ಗಿಂತ ಮೊದಲು ಕ್ರಿಸ್ ಗೇಲ್, ಶೋಯೆಬ್ ಮಲಿಕ್, ಕೈರಾನ್ ಪೊಲಾರ್ಡ್, ಅಲೆಕ್ಸ್ ಹೇಲ್ಸ್ ಮತ್ತು ಡೇವಿಡ್ ವಾರ್ನರ್ ಇದ್ದಾರೆ. ಆದರೆ, ಅತಿ ವೇಗವಾಗಿ 12000 ರನ್ ಪೂರೈಸಿದ ವಿಚಾರಕ್ಕೆ ಬರುವುದಾದರೆ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ.