ಕಾರ್ಸನ್ : ಫಿಫಾ ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಶುಕ್ರವಾರ ತಡರಾತ್ರಿಯಿಂದ ಆರಂಭವಾಗಲಿದ್ದು, ತಡರಾತ್ರಿ 12.30ರ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ ಸ್ಪೇನ್ ಮತ್ತು ಬಲಿಷ್ಠ ಬೆಲ್ಜಿಯಂ ಮುಖಾಮುಖಿಯಾಗಲಿವೆ.
ಈ ಪಂದ್ಯ ಲಾಸ್ ಏಂಜಲೀಸ್‌ನ ಸೋಫಿ ಮೈದಾನದಲ್ಲಿ ನಡೆಯಲಿದೆ. ಸ್ಪೇನ್ ಪಾಲಿಗಿದು 7ನೇ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯ. ಇದಕ್ಕೂ ಮುನ್ನ 1934, 1986, 1994, 2002, 2010, 2026ರಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಆಡಿದೆ. ಇವುಗಳಲ್ಲಿ ಸ್ಪೇನ್ 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿತ್ತು. ಅದೇ ವರ್ಷ ಫೈನಲ್‌ನಲ್ಲೂ ಸ್ಪರ್ಧಿಸಿತ್ತು. ಆ ವರ್ಷ ಫೈನಲ್‌ನಲ್ಲಿ ನೆದರ್ಲ್ಯಾಂಡ್ಸ್ ಅನ್ನು 1-0 ಮಣಿಸಿದ್ದ ಸ್ಪೇನ್ ಚೊಚ್ಚಲ ಟ್ರೋಫಿ ಗೆದ್ದು ಬೀಗಿತ್ತು.
ಬೆಲ್ಜಿಯಂ ಇದು 5ನೇ ಬಾರಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸುತ್ತಿದೆ. ಈ ಮುನ್ನ 1986, 2014, 2018, 2026ರಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ಆಡಿತ್ತು. ಇನ್ನು 1986 ಮತ್ತು 2018ರಲ್ಲಿ ಸೆಮಿಫೈನಲ್‌ಗೇರಿತ್ತಾದರೂ ಈ ವೇಳೆ ಕ್ರಮವಾಗಿ ಆರ್ಜೆಂಟೀನಾ ಮತ್ತು ಫ್ರಾನ್ಸ್ ವಿರುದ್ಧ ಸೋತಿತ್ತು. ರೆಡ್ ಡೆವಿಲ್ಸ್ ಎಂದು ಕರೆಸಿಕೊಳ್ಳುವ ಬೆಲ್ಜಿಯಂ, ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಆತಿಥೇಯ ಅಮೆರಿಕ ವಿರುದ್ಧ 4-1 ಅಂತರದ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಅತ್ತ ಸ್ಪೇನ್, ಬಲಿಷ್ಠ ಪೋರ್ಚುಗಲ್ ತಂಡವನ್ನು 1-0 ಅಂತರದಿಂದ ಮಣಿಸಿ ಮುನ್ನಡೆ ಪಡೆದುಕೊಂಡಿತ್ತು.
ತಾರಾ ಆಟಗಾರರು ಸ್ಪೇನ್ ತಂಡದಲ್ಲಿ ಮೈಕೆಲ್ ಒಯಾರ್ಜಬಲ್ (ಫಾರ್ವರ್ಡ್), ರೋಡ್ರಿ (ಮಿಡ್‌ಫೀಲ್ಡರ್), ಪೌ ಕುಬಾರ್ಸಿ (ಡಿಫೆಂಡರ್), ಲಾಮಿನ್ ಯಮಾಲ್ (ವಿಂಗರ್ಸ್) ಪ್ರಮುಖ ಆಟಗಾರರಾಗಿದ್ದಾರೆ. ಇನ್ನು ಬೆಲ್ಜಿಯಂ ತಂಡದಲ್ಲಿ ಕೆವಿನ್ ಡಿ ಬ್ರೂಯ್ನೆ (ಮಿಡ್‌ಫೀಲ್ಡರ್), ಚಾರ್ಲ್ಸ್ ಡಿ ಕೆಟೆಲೇರೆ (ಫಾರ್ವರ್ಡ್) ಮತ್ತು ರುಮೇಲು ಲುಕಾಕು (ಫಾರ್ವರ್ಡ್) ಕಣ್ಣಿಡಬೇಕಾದ ಆಟಗಾರರಾಗಿದ್ದಾರೆ.
ಆರ್ಜೆಂಟೀನಾ-ಈಜಿಪ್ಟ್ ಪಂದ್ಯದ ವೇಳೆ ಗಮನ ಸೆಳೆದಿದ್ದ ವಿವಾದಿತ ರೆಫ್ರಿ ಫ್ರಾಂಕೋಯಿಸ್ ಲೆಟೆಕ್ಸಿಯರ್ ವಿರುದ್ಧ ಈಜಿಪ್ಟ್ ನಿಂದ ದೂರು ದಾಖಲಾಗಿದ್ದು ಇವರನ್ನು ಫಿಫಾ ತನಿಖೆ ನಡೆಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಇನ್ನೊಂದು ವರದಿಯ ಪ್ರಕಾರ, ತನಿಖೆಯ ವೇಳೆ ರೆಫ್ರಿಯ ತಪ್ಪು ಕಂಡುಬಂದಿಲ್ಲ ಎನ್ನಲಾಗಿದೆ.
ಬೋಸ್ನಿಯಾ ವಿರುದ್ಧದ ಪ್ರಿಕ್ವಾರ್ಟರ್ ಪಂದ್ಯದಲ್ಲಿ ಅಮೆರಿಕ ಆಟಗಾರ ಫೋಲರಿನ್ ಬಲೋಗುನ್‌ಗೆ ರೆಡ್ ಕಾರ್ಡ್ ನೀಡಿ, ಅವರಿಗೆ ನಿಷೇಧ ಹೇರಲಾಗಿತ್ತು. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೋಗೆ ಕರೆ ಮಾಡಿ, ಬಲೋಗುನ್ ಮೇಲಿನ ನಿಷೇಧ ತೆಗೆಯುವಂತೆ ಒತ್ತಡ ಹೇರಿದ್ದರು. ಬಳಿಕ ನಿಷೇಧವನ್ನು ತೆಗೆಯಲಾಗಿತ್ತು. ಈ ಘಟನೆ ವಿವಾದಕ್ಕೆ ಗುರಿಯಾಗಿದ್ದು, ಗಿಯಾನಿ ವಿರುದ್ಧ ಒಲಿಂಪಿಕ್ಸ್ ನೈತಿಕ ಮಂಡಳಿಗೆ ದೂರು ನೀಡಲಾಗಿದೆ.

