ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಯ ಮೂಲಕ ಶಿವಶಂಕರ್ ಸ್ಪೋರ್ಟ್ಸ್ ಅಕಾಡೆಮಿಯ (SSSA) ಮೂವರು ಯುವ ಕ್ರೀಡಾಪಟುಗಳು ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಗಳಿಗೆ ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಮತ್ತು ಅಕಾಡೆಮಿಗೆ ಹೆಮ್ಮೆ ತಂದಿದ್ದಾರೆ.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರು ವಿಭಾಗವನ್ನ ಪ್ರತಿನಿಧಿಸಿದ್ದ ಶಿವನ್, ದಾನೇಶ್ ಮತ್ತು ಲೋಕಾರ್ಜುನ್ ಅವರು ಅತ್ಯುತ್ತಮ ಪ್ರದರ್ಶನ ನೀಡಿ, ರಾಷ್ಟ್ರಮಟ್ಟದ ತಂಡಕ್ಕೆ ಸ್ಥಾನ ಪಡೆದಿದ್ದಾರೆ. ಈ ಸಾಧನೆಯು ಅಕಾಡೆಮಿಯ ತರಬೇತಿ ಮತ್ತು ವಿದ್ಯಾರ್ಥಿಗಳ ದೃಢ ಸಂಕಲ್ಪಕ್ಕೆ ಸಂದ ಜಯವಾಗಿದೆ.

ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಯ ಕುರಿತು ಮಾತನಾಡಿ, ಅವರನ್ನು ಅಭಿನಂದಿಸಿದ ಶಿವಶಂಕರ ಸ್ಪೋರ್ಟ್ಸ್ ಅಕಾಡೆಮಿಯ ಸಂಸ್ಥಾಪಕರಾದ ನವೀನ್ ಕುಮಾರ್ ಅವರು, “ನಮ್ಮ ಮೂವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಅತ್ಯಂತ ಸಂತೋಷದ ವಿಷಯ. ಗ್ರಾಮೀಣ ಭಾಗದಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ.

ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಗುಣಮಟ್ಟದ ತರಬೇತಿಯನ್ನು ನೀಡಿದರೆ, ಅವರು ನಿಸ್ಸಂದೇಹವಾಗಿ ಉತ್ತಮ ಸಾಧಕರಾಗಿ ಹೊರಹೊಮ್ಮುತ್ತಾರೆ ಎಂಬ ವಿಶ್ವಾಸ ನನಗಿದೆ. ನಮ್ಮ ಅಕಾಡೆಮಿ ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತದೆ” ಎಂದು ತಿಳಿಸಿದರು.

ಅಕಾಡೆಮಿಯ ತರಬೇತುದಾರರು ಮತ್ತು ಆಡಳಿತ ಮಂಡಳಿಯು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಂದಿನ ಹಂತದ ಪಂದ್ಯಾವಳಿಗಳಿಗೆ ಶುಭ ಕೋರಿದ್ದಾರೆ. ಈ ಯುವ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಿ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಹಾರೈಸಲಾಗಿದೆ.

ಇದೇ ಸಂದರ್ಭದಲ್ಲಿ ತರಬೇತುದರಾದ, ವಿಷ್ಣು ಪ್ರಸಾದ್, ಮಹಾಂತೇಶ್ ಮಧು, ವಕೀಲ ವೀರಭದ್ರ ಸ್ವಾಮಿ , ರಘು ರಾಮ್ ರಾಜು ಅರಸ್, ಸಂದೇಶ್ ಮತ್ತಿತರು ಹಾಜರಿದ್ದರು.