ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಣಾಹಣಿಗೆ ವೇದಿಕೆ ಸಿದ್ಧವಾಗಿದ್ದು, ಜಿದ್ದಾಜಿದ್ದಿನ ಪ್ರಶಸ್ತಿ ಫೈಟ್ಗೆ ಬದ್ಧವೈರಿಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರು ಸಜ್ಜಾಗುತ್ತಿದ್ದಾರೆ. ಫೈನಲ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಟೀಂ ಇಂಡಿಯಾ ಆಟಗಾರರು ಶುಕ್ರವಾರ ಅಭ್ಯಾಸ ಆರಂಭಿಸಿದ್ದಾರೆ.
ಗುರುವಾರ ರಾತ್ರಿ ನಗರಕ್ಕೆ ಆಗಮಿಸಿದ ರೋಹಿತ್ ಶರ್ಮಾ ಬಳಗ ಶುಕ್ರವಾರ ಬೆಳಗ್ಗೆ ಮೈದಾನಕ್ಕಿಳಿಯಿತು. ರೋಹಿತ್, ಕೋಚ್ ರಾಹುಲ್ ದ್ರಾವಿಡ್ ಹಾಗೂ ಇತರ ಸಹಾಯಕ ಸಿಬ್ಬಂದಿ ಜೊತೆ ಪಿಚ್, ಔಟ್ಫೀಲ್ಡ್ ಪರಿಶೀಲಿಸಿದರು. ಶನಿವಾರ ಭಾರತ ಕೊನೆಯ ಸುತ್ತಿನ ಅಭ್ಯಾಸ ನಡೆಸಲಿದೆ. ಆಸ್ಟ್ರೇಲಿಯಾ ಆಟಗಾರರು ಶುಕ್ರವಾರ ಮಧ್ಯಾಹ್ನ ಅಹಮದಾಬಾದ್ ತಲುಪಿದ್ದು, ಶನಿವಾರ ಬೆಳಗ್ಗೆ ನೆಟ್ಸ್ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಫೈನಲ್ ಪಂದ್ಯಕ್ಕೆ ಅಂಪೈರ್ಗಳ ಹೆಸರನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ಇಂಗ್ಲೆಂಡ್ನ ರಿಚರ್ಡ್ ಇಲ್ಲಿಂಗ್ವರ್ಥ್ ಹಾಗೂ ರಿಚರ್ಡ್ ಕೆಟಲ್ಬರೋ ಪಂದ್ಯದಲ್ಲಿ ಆನ್ಫೀಲ್ಡ್ ಅಂಪೈರ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ಲಭಿಸಿದೆ.