ನವದೆಹಲಿ: ಭಾರತ ತಂಡ ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ನಲ್ಲಿ ರೋಹಿತ್ ಶರ್ಮ ಸಾರಥ್ಯದಲ್ಲಿ ಪ್ರಶಸ್ತಿ ಜಯಿಸುವ ವಿಶ್ವಾಸವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ವ್ಯಕ್ತಪಡಿಸಿದ್ದಾರೆ.
ಈ ಮೂಲಕ 2025ರ ಜೂನ್ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ವರೆಗೂ ರೋಹಿತ್ ಶರ್ಮ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ಮುಂದುವರಿಯುವುದನ್ನು ಖಚಿತಪಡಿಸಿದ್ದಾರೆ.
‘ಟಿ20 ವಿಶ್ವಕಪ್ ಗೆಲುವನ್ನು ನಾನು ರೋಹಿತ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ರವೀಂದ್ರ ಜಡೇಜಾಗೆ ಅರ್ಪಿಸಲು ಬಯಸುತ್ತೇನೆ. ಕಳೆದ ಒಂದು ವರ್ಷದಲ್ಲಿ ಐಸಿಸಿ ಟೂರ್ನಿಯಲ್ಲಿ ಇದು ನಮ್ಮ 3ನೇ ಫೈನಲ್ ಆಗಿತ್ತು. ಕಳೆದ ವರ್ಷ ನಾವು ಏಕದಿನ ವಿಶ್ವಕಪ್ನಲ್ಲಿ ಜನರ ಹೃದಯ ಗೆದ್ದರೂ, ಕಪ್ ಗೆಲ್ಲಲು ವಿಫಲರಾಗಿದ್ದೆವು. ಚಾಂಪಿಯನ್ಸ್ ಟ್ರೋಫಿ ಮತ್ತು ಡಬ್ಲ್ಯುಟಿಸಿ ಫೈನಲ್ ನಮ್ಮ ಮುಂದಿನ ಗುರಿಗಳಾಗಿವೆ’ ಎಂದು ಜಯ್ ಷಾ ವಿಡಿಯೋ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.

