ಪ್ಯಾರಿಸ್‌: ಜಗತ್ತಿನ ಅತಿದೊಡ್ಡ ಕ್ರೀಡಾಕೂಟವಾದ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ ಉದ್ಘಾಟನ ಸಮಾರಂಭದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದ ವಿನ್ಯಾಸಕಾರ ತರುಣ್‌ ತಹಿಲಿಯಾನಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಬೈದಿದ್ದಾರೆ.

ಅಂಬಾನಿ ಮಗನ ಮದುವೆ ವಿಚಾರ ಬಂದಾಗ ನೀವು ಮಾಸ್ಟರ್‌ಪೀಸ್‌ ಆದ ಡ್ರೆಸ್‌ಗಳನ್ನು ವಿನ್ಯಾಸ ಮಾಡುತ್ತೀರಿ. ದೇಶದ ವಿಚಾರ ಬಂದಾಗ ಇಂಥ ಕೆಟ್ಟ ವಿನ್ಯಾಸದ ಡ್ರೆಸ್‌ ಮಾಡುತ್ತೀರಿ. ಭಾರತದ ಕ್ರೀಡಾಪಟುಗಳು ಧರಿಸಿದ್ದ ಸಮವಸ್ತ್ರಗಳು ಕಳೆಪೆ ಗುಣಮಟ್ಟದ್ದಾಗಿತ್ತು, ದೇಶಕ್ಕೆ ಅವಮಾನ ಮಾಡುವ ರೀತಿಯತ್ತು ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.

ಪಥಸಂಚಲನಕ್ಕೂ ಮುನ್ನ ಧ್ವಜಧಾರಿಗಳಾದ ಪಿವಿ.ವಿ ಸಿಂಧು ಮತ್ತು ಶರತ್‌ ಕಮಲ್‌ ಸೇರಿದಂತೆ ಹಲವು ಭಾರತೀಯ ಕ್ರೀಡಾಪಟುಗಳು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ವಿನ್ಯಾಸ ಮಾಡಲಾಗಿದ್ದ ಸಮವಸ್ತ್ರ ಧರಿಸಿದ್ದ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಫೋಟೊ ಕಂಡ ನೆಟ್ಟಿಗರು ಭಾರತೀಯರ ಸಮವಸ್ತ್ರದ ವಿನ್ಯಾಸ ಕಳಪೆ ಗುಣಮಟ್ಟದ್ದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಡಾ. ನಂದಿತಾ ಅಯ್ಯರ್​ ಎನ್ನುವ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ, ‘ಹಲೋ ತರುಣ್‌ ತಹಲಿಯಾನಿ, ಇದಕ್ಕಿಂತ ಉತ್ತಮವಾದ ಸೀರೆಗಳನ್ನು ನಾನು ಮುಂಬೈನ ಬೀದಿಗಳಲ್ಲಿ ಬರೀ 200 ರೂಪಾಯಿಗೆ ನೋಡಿದ್ದೇನೆ. ಆದರೆ, ನೀವು ಡಿಸೈನ್‌ ಮಾಡಿದ್ದು ಸಮಾರಂಭಕ್ಕೆ ಧರಿಸುವ ಸೀರೆಗಳಾಗಿರಲಿಲ್ಲ. ಅತ್ಯಂತ ಕಳಪೆ ಮಟ್ಟದಿಂದ ಕೂಡಿದ ವಿನ್ಯಾಸ ಇದಾಗಿತ್ತು. ಇದನ್ನು ನೋಡುವಾಗ ಡೆಡ್‌ಲೈನ್‌ಗೆ ಮೂರು ನಿಮಿಷ ಬಾಕಿ ಇರುವಾಗ ತರಾತುರಿಯಲ್ಲಿ ಪ್ರಿಂಟ್​ ಮಾಡಿದ ಡಿಸೈನ್​ನಂತೆ ತೋರುತ್ತಿದೆ. ದೇಶದಲ್ಲಿರುವ ಶ್ರೀಮಂತ ಜವಳಿ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ನೀವು ಮಾಡಿದ ಅವಮಾನ ಇದಾಗಿದೆ” ಎಂದು ಬರೆದುಕೊಂಡು ಟೀಕಿಸಿದ್ದಾರೆ.

https://x.com/saffrontrail/status/1817009769544061019