9ನೇ ಆವೃತ್ತಿಯ ಟಿ20 ವಿಶ್ವಕಪ್ ನಿನ್ನೆಯಿಂದ ಅಂದರೆ ಜೂನ್ 2 ರಿಂದ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಆರಂಭವಾಗಿದೆ. ಈ ಬಾರಿಯ ಟಿ20 ವಿಶ್ವಕಪ್ ಹಲವು ವಿಚಾರಗಳಿಂದ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಅದರಲ್ಲಿ ಒಂದೆಂದರೆ ಇದೇ ಮೊದಲ ಬಾರಿಗೆ 20 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ.
ಇದೀಗ ಐಸಿಸಿ, ಈ ಆವೃತ್ತಿಯ ಬಹುಮಾನದ ಮೊತ್ತವನ್ನು ಪ್ರಕಟಿಸಿದೆ. ಐಸಿಸಿ ಘೋಷಿಸಿರುವ ಪ್ರಕಾರ ಈ ಬಾರಿಯ ಟಿ20 ವಿಶ್ವಕಪ್ ಬಹುಮಾನದ ಗಾತ್ರ 11.25 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾರಿಯಲ್ಲಿ ಸುಮಾರು ರೂ 93.50 ಕೋಟಿ ರೂಗಳನ್ನು ಬಹುಮಾನದ ಮೊತ್ತವಾಗಿ ಇರಿಸಲಾಗಿದೆ. ಈ ಮೊತ್ತದಲ್ಲಿ ಚಾಂಪಿಯನ್ ತಂಡಕ್ಕೆ 2.45 ಮಿಲಿಯನ್ ಡಾಲರ್ (ಸುಮಾರು 20 ಕೋಟಿ ರೂ.) ಬಹುಮಾನ ಸಿಗಲಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚಾಂಪಿಯನ್ ತಂಡಕ್ಕೆ ಇಷ್ಟು ಗಾತ್ರದ ಹಣವನ್ನು ಬಹುಮಾನವನ್ನಾಗಿ ನೀಡಲಾಗುತ್ತಿದೆ. ಚಾಂಪಿಯನ್ ತಂಡಕ್ಕೆ 20 ಕೋಟಿ ರೂ. ಬಹುಮಾನವಾಗಿ ಸಿಕ್ಕರೆ, ರನ್ನರ್ ಅಪ್ ತಂಡಕ್ಕೆ ಅಂದರೆ ಫೈನಲ್ನಲ್ಲಿ ಸೋತ ತಂಡಕ್ಕೆ 1.28 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 10.64 ಕೋಟಿ ರೂ. ಬಹುಮಾನ ಸಿಗಲಿದೆ. ಇಷ್ಟೆ ಅಲ್ಲದೆ ಸೆಮಿಫೈನಲ್ನಲ್ಲಿ ಸೋತ ತಂಡಗಳಿಗೂ ಭರ್ಜರಿ ಬಹುಮಾನ ಸಿಗಲಿದೆ.

