ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ 14ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ತಂಡ ಅಮೋಘ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ್ ಉತ್ತಮ ಆರಂಭ ಪಡೆದುಕೊಂಡಿತು.
ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝದ್ರನ್ ಮೊದಲ ವಿಕೆಟ್ಗೆ 103 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಈ ಹಂತದಲ್ಲಿ ಮ್ಯಾಟ್ ಹೆನ್ರಿ ಎಸೆದ ಎಸೆತವನ್ನು ಗುರುತಿಸುವಲ್ಲಿ ಎಡವಿ ಇಬ್ರಾಹಿಂ ಝದ್ರಾನ್ (44) ಕ್ಲೀನ್ ಬೌಲ್ಡ್ ಆದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಹಮಾನುಲ್ಲ ಗುರ್ಬಾಝ್ 56 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 80 ರನ್ ಸಿಡಿಸಿದರು. ಈ ಮೂಲಕ ಅಫ್ಘಾನಿಸ್ತಾನ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು.
160 ರನ್ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಎಡಗೈ ವೇಗಿ ಫಝಲ್ಹಕ್ ಫಾರೂಖಿ ಯಶಸ್ವಿಯಾದರು. ಮೊದಲ ಓವರ್ನ ಮೊದಲ ಎಸೆತದಲ್ಲೇ ಫಿನ್ ಅಲೆನ್ (0) ರನ್ನು ಕ್ಲೀನ್ ಬೌಲ್ಡ್ ಮಾಡಿದ ಫಾರೂಖಿ 3ನೇ ಓವರ್ನಲ್ಲಿ ಡೆವೊನ್ ಕಾನ್ವೆ (8) ವಿಕೆಟ್ ಪಡೆದರು.
ಅಂತಿಮವಾಗಿ ನ್ಯೂಝಿಲೆಂಡ್ ತಂಡವು 15.2 ಓವರ್ಗಳಲ್ಲಿ 75 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಅಫ್ಘಾನಿಸ್ತಾನ್ ತಂಡವು 84 ರನ್ಗಳ ಅಮೋಘ ಗೆಲುವು ದಾಖಲಿಸಿದೆ.

