ನಿನ್ನೆ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ  ರಣ ರೋಚಕ ಪಂದ್ಯದಲ್ಲಿ ಭಾರತ ಆರು ರನ್‌ಗಳಿಂದ ಪಾಕಿಸ್ತಾನವನ್ನು  ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ಕೇವಲ ಮೂವರಿಗೆ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಇಬ್ಬರು ಆಟಗಾರರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಉಳಿದ ಆರು ಬ್ಯಾಟರ್ಸ್​ಗಳು ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು.

ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ ಸತತ ವಿಕೆಟ್​ಗಳ ಪತನದ ಕಾರಣ ಹಾಗೂ ಭಾರತದ ವೇಗಿಗಳ ಕರಾರುವಕ್ಕಾದ ದಾಳಿಯಿಂದಾಗಿ 20 ಓವರ್​ಗಳಲ್ಲಿ 113 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ನಾಯಕ ಬಾಬರ್ ಹಾಗೂ ರಿಜ್ವಾನ್ ಮೊದಲ ವಿಕೆಟ್​ಗೆ 26 ರನ್​​ಗಳ ಜೊತೆಯಾಟ ನೀಡಿದರು. ಈ ವೇಳೆ ಶಿವಂ ದುಬೆ, ರಿಜ್ವಾನ್ ಅವರ ಕ್ಯಾಚ್ ಕೈಚೆಲ್ಲಿದ್ದು, ಪಾಕ್ ತಂಡಕ್ಕೆ ವರವಾಯಿತು. ಆದರೆ ಯಾರ್ಕರ್ ಕಿಂಗ್ ಬುಮ್ರಾ, ಬಾಬರ್ ವಿಕೆಟ್ ಉರುಳಿಸುವ ಮೂಲಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಎರಡನೇ ವಿಕೆಟ್​ಗೆ ಜೊತೆಯಾದ ಉಸ್ಮಾನ್ ಖಾನ್ 13 ರನ್​​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಫಾಖರ್ ಜಮಾನ್ ಕೂಡ 13 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

ಭಾರತದ ಪರ ಬುಮ್ರಾ ಮೂರು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹಾರ್ದಿಕ್ ಎರಡು ವಿಕೆಟ್, ಅರ್ಷದೀಪ್ ಮತ್ತು ಅಕ್ಷರ್ ತಲಾ ಒಂದು ವಿಕೆಟ್ ಪಡೆದರು.

ಇದರೊಂದಿಗೆ ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಟೀಂ ಇಂಡಿಯಾ  4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಲೀಗ್​ನಲ್ಲಿ ಸತತ ಎರಡನೇ ಸೋಲು ಅನುಭವಿಸಿದ ಪಾಕ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದ್ದು, ಈ ಸೋಲಿನ ನಂತರ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸುವ ಆತಂಕದಲ್ಲಿದೆ.