ಬೆಂಗಳೂರು:  ಭಾರತ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ ಎಂದು ಕ್ರಿಕ್​ಇನ್​ಫೋ ವರದಿ ಮಾಡಿದೆ. ಈ ಹಿಂದೆ ಕಳೆದ ಒಂದು ವರ್ಷಗಳಿಂದ ರೋಹಿತ್​ ಬಳಿಕ ಹಾರ್ದಿಕ್‌ ಪಾಂಡ್ಯರನ್ನೇ ಭವಿಷ್ಯದ ನಾಯಕ ಎಂದು ಬಿಂಬಿಸಲಾಗಿತ್ತು. ಆದರೀಗ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್​ಗೆ ನಾಯಕನ ಪಟ್ಟ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಅದರಂತೆ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಸೂರ್ಯ ಭಾರತ ಟಿ20 ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಸೂರ್ಯಕುಮಾರ್ ಯಾದವ್ ಇದಕ್ಕೂ ಮುನ್ನ ಭಾರತ ತಂಡವನ್ನು 7 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆ ಟೀಮ್ ಇಂಡಿಯಾದ ಸಾರಥ್ಯವಹಿಸಿದ್ದ ಸೂರ್ಯ 5 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಇದೀಗ ಜುಲೈ 27 ರಿಂದ ಶುರುವಾಗಲಿರುವ ಟಿ20 ಸರಣಿ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.