ಬೆಂಗಳೂರು: ಟಾಟಾ ಐಪಿಎಲ್- 2026ರ ಕ್ರಿಕೆಟ್ ಫೈನಲ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಲುಪಿದ್ದು, ಫೈನಲ್ ಪಂದ್ಯಾವಳಿಯ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ ಎಂಬ ಮಾರ್ಗಸೂಚಿಗಳನ್ನು ಬೆಂಗಳೂರು ಪೊಲೀಸರು ಹೊರಡಿಸಿದ್ದಾರೆ.
ಮೇ 31ರಂದು ನಡೆಯಲಿರುವ ಟಾಟಾ ಐಪಿಎಲ್- 2026ರ ಕ್ರಿಕೆಟ್ ಫೈನಲ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಲುಪಿದ್ದು, ಫೈನಲ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲವು ಸುರಕ್ಷಿತ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
ಫೈನಲ್ ಪಂದ್ಯದ ಫಲಿತಾಂಶ ಬಂದ ನಂತರ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ. ರಸ್ತೆಗಳಿಗೆ ಮುಖ ಮಾಡಿರುವ ಎಲ್‌ಇಡಿ ವಾಲ್‌ಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೆ ಅಳವಡಿಸಬಾರದು ಹಾಗೂ ಈಗಾಗಲೇ ಅಳವಡಿಸಿರುವ ಎಲ್‌ಇಡಿ ವಾಲ್‌ಗಳಲ್ಲಿ ಪಂದ್ಯವನ್ನು ಪ್ರಸಾರ ಮಾಡಬಾರದು. ಪಟಾಕಿ ಸಿಡಿಸಬಾರದು, ಅಪಾಯಕಾರಿ ವಸ್ತುಗಳನ್ನು ಬಳಸಬಾರದು. ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡುವುದು. ಸಂಚಾರ ಪೊಲೀಸರು ನೀಡುವ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.
ಬೈಕ್ ರ್ಯಾಲಿ, ಅತಿವೇಗ ಚಾಲನೆ, ಸ್ಟಂಟ್, ಹಾರ್ನ್ ದುರುಪಯೋಗ ಮತ್ತು ರಸ್ತೆ ತಡೆ ಮಾಡುವುದನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಅಶಾಂತಿ ಸೃಷ್ಟಿಸುವುದು, ಜಗಳವಾಡುವುದು ಅಥವಾ ಅಸಭ್ಯವಾಗಿ ವರ್ತಿಸಬಾರದೆಂದು ಸೂಚಿಸಲಾಗಿದೆ. ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್, ದ್ವೇಷಪೂರಿತ ಸಂದೇಶ ಅಥವಾ ವದಂತಿಗಳನ್ನು ಹಂಚಬಾರದು.
ಪಂದ್ಯ ಫಲಿತಾಂಶದ ಹೆಸರಿನಲ್ಲಿ ಇತರ ತಂಡದ ಅಭಿಮಾನಿಗಳನ್ನು ಪ್ರಚೋದಿಸುವುದು, ನಿಂದಿಸುವುದು ಅಥವಾ ಜಗಳಕ್ಕೆ ಕಾರಣವಾಗುವಂತೆ ವರ್ತಿಸಬಾರದು. ಕಾನೂನು-ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಮರೆಯಬಾರದು ಎಂದು ಬೆಂಗಳೂರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

