ಬಂಟ್ವಾಳ: ಕರ್ನಾಟಕ ರಾಜ್ಯ ಡಾಡ್ಜ್‌ಬಾಲ್ ಅಸೋಸಿಯೇಷನ್, ದಕ್ಷಿಣ ಕನ್ನಡ ಡಾಡ್ಜ್‌ಬಾಲ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ, ಭಾರತೀಯ ಡಾಡ್ಜ್‌ಬಾಲ್ ಫೆಡರೇಶನ್‌ನ ಆಶ್ರಯದಲ್ಲಿ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲೇಟ್ ಉದಯ್ ಚೌಟ ಒಳಾಂಗಣ ಕ್ರೀಡಾಂಗಣದಲ್ಲಿ ಏಪ್ರಿಲ್ 24 ಮತ್ತು 25 ರಂದು ನಡೆದ 3ನೇ ಸೀನಿಯರ್ ಕರ್ನಾಟಕ ರಾಜ್ಯ ಮಟ್ಟದ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ 2025 ನ ಪುರುಷರ ವಿಭಾಗದಲ್ಲಿ ಉಡುಪಿ ಜಿಲ್ಲೆ ಹಾಗೂ ಮಹಿಳೆಯರ ವಿಭಾಗದಲ್ಲಿ ಮಂಡ್ಯ ಜಿಲ್ಲಾ ತಂಡ ಜಯಗಳಿಸಿದೆ.
ಈ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 16 ಪುರುಷ ತಂಡಗಳು ಮತ್ತು 12 ಮಹಿಳಾ ತಂಡಗಳು ಭಾಗವಹಿಸಿದ್ದವು. ಪುರುಷರ ವಿಭಾಗದಲ್ಲಿ ಸೆಮಿಫೈನಲ್ ಪಂದ್ಯ ಉಡುಪಿ ಮತ್ತು ಬೆಂಗಳೂರು ಸೆಂಟ್ರಲ್ ನಡುವೆ ನಡೆದಿದ್ದು, ಉಡುಪಿ ತಂಡ 3-0 ಸೆಟ್‌ಗಳಿಂದ ಗೆದ್ದಿತು, ಮಂಡ್ಯ ಮತ್ತು ಗರುಡ ಸ್ಪೋರ್ಟ್ಸ್ ಕ್ಲಬ್ ತಂಡ ದ ಸೆಮಿಫೈನಲ್ ನಲ್ಲಿ ಗರುಡ ಸ್ಪೋರ್ಟ್ಸ್ ಕ್ಲಬ್ ತಂಡ 4-1 ಸೆಟ್‌ಗಳಿಂದ ಗೆದ್ದಿತು. ಅಂತಿಮ ಫೈನಲ್ ಪಂದ್ಯ ಉಡುಪಿ ಮತ್ತು ಗರುಡ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು ತಂಡದ ನಡುವೆ ನಡೆದಿದ್ದು ಉಡುಪಿ ಜಿಲ್ಲಾ ತಂಡ ಗೆಲುವಿನ ನಗೆ ಬೀರಿತು. ಉಡುಪಿ ಜಿಲ್ಲೆಯ ನಯನ್ ಜೋಗಿ ಮತ್ತು ಸಂದೀಪ ಉತ್ತಮ ಆಟವಾಡಿ ತಂಡ ಫೈನಲ್ಸ್ ಗೆಲ್ಲಲು ಕಾರಣರಾದರು.

ಮಹಿಳಾ ವಿಭಾಗದ ಸೆಮಿಫೈನಲ್ ಮಂಡ್ಯ ಮತ್ತು ಹಾಸನ ತಂಡದ ನಡುವೆ ನಡೆದಿದ್ದು, 2-0 ಸೆಟ್‌ಗಳಿಂದ ಮಂಡ್ಯ ತಂಡ ಗೆದ್ದಿತು. ಬೆಂಗಳೂರು ಸೆಂಟ್ರಲ್ ಮತ್ತು ಗರುಡ ಸ್ಪೋರ್ಟ್ಸ್ ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಬೆಂಗಳೂರು ಸೆಂಟ್ರಲ್ ತಂಡ 2-1 ಸೆಟ್‌ಗಳಿಂದ ಗೆದ್ದಿತು. ಫೈನಲ್ ಪಂದ್ಯಾಟವು ಬೆಂಗಳೂರು ಸೆಂಟ್ರಲ್ ಮತ್ತು ಮಂಡ್ಯದ ನಡುವೆ ನಡೆದಿದ್ದು, ಮಂಡ್ಯ ತಂಡವು ವಿಜಯಶಾಲಿಯಾಯಿತು. ಮಂಡ್ಯ ತಂಡದ ಪೂರ್ವಿ ಅಶೋಕ್ ಅಂಗಡಿ, ಪೂರ್ವಿತಾ ಯು ಸಿ ಮತ್ತು ಲಿಖಿತಾ ಉತ್ತಮ ಆಟವಾಡಿ ತಂಡ ಫೈನಲ್ಸ್ ಗೆಲ್ಲಲು ಕಾರಣರಾದರು.
ಪುರುಷರ ವಿಭಾಗದಲ್ಲಿ 2ನೇ ಸ್ಥಾನ ವನ್ನು ಗರುಡ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು, 3ನೇ ಸ್ಥಾನ – ಬೆಂಗಳೂರು ಸೆಂಟ್ರಲ್ ಜಿಲ್ಲಾ ತಂಡ ಹಾಗೂ 4ನೇ ಸ್ಥಾನ ವನ್ನು ಮಂಡ್ಯ ಜಿಲ್ಲಾ ತಂಡ ಪಡೆಯಿತು. ಮಹಿಳಾ ವಿಭಾಗದಲ್ಲಿ 2ನೇ ಸ್ಥಾನ ವನ್ನು ಬೆಂಗಳೂರು ಸೆಂಟ್ರಲ್ ಜಿಲ್ಲಾ ತಂಡ, 3ನೇ ಸ್ಥಾನವನ್ನು ಹಾಸನ ಜಿಲ್ಲಾ ತಂಡ ಹಾಗೂ 4ನೇ ಸ್ಥಾನವನ್ನು ಬೆಂಗಳೂರಿನ ಗರುಡ ಸ್ಪೋರ್ಟ್ಸ್ ಕ್ಲಬ್ ತಂಡ ಪಡೆದುಕೊಂಡಿತು.

