ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯಗಳ ಭದ್ರತೆ ಮತ್ತು ಪಾರದರ್ಶಕತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನುಮುಂದೆ ಐಪಿಎಲ್ ಪಂದ್ಯಗಳ ವೇಳೆ ಆಟಗಾರರು ಹಾಗೂ ತಂಡದ ಸಿಬ್ಬಂದಿ ಯಾವುದೇ ರೀತಿಯ ಸ್ಮಾರ್ಟ್ ಗ್ಲಾಸ್ ಅಥವಾ ಹೈ-ಟೆಕ್ ಗ್ಲಾಸ್ ಬಳಸುವಂತಿಲ್ಲ. ಪ್ರಸ್ತುತ ಟೂರ್ನಿಯಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಕ್ರೀಡಾಂಗಣ ಪ್ರದೇಶಗಳಲ್ಲಿ ಸ್ಮಾರ್ಟ್ ಗ್ಲಾಸ್ ಧರಿಸದಂತೆ ಎಲ್ಲಾ ಫ್ರಾಂಚೈಸಿಗಳಿಗೆ ಸೂಚಿಸಲಾಗಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಸ್ಮಾರ್ಟ್ ಗ್ಲಾಸ್‌ಗಳ ಮೂಲಕ ರಹಸ್ಯ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ತಂಡಗಳ ತಂತ್ರಗಳು ಹಾಗೂ ಒಳಗಿನ ಮಾಹಿತಿ ಸೋರಿಕೆಯಾಗುವ ಅಪಾಯವಿದೆ ಎಂದು ಹೇಳಲಾಗಿದೆ.

ಲೈವ್ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಂತಹ ಅಕ್ರಮ ಚಟುವಟಿಕೆಗಳಿಗೆ ಇಂತಹ ಹೈ-ಟೆಕ್ ಸಾಧನಗಳನ್ನು ಬಳಸುವ ಸಾಧ್ಯತೆಯೂ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ವಿಶೇಷ ತಂತ್ರಜ್ಞಾನ ಕಂಪನಿಗಳು ಆಟಗಾರರು ಮತ್ತು ತಂಡದ ಸಿಬ್ಬಂದಿಗೆ ಸುಧಾರಿತ ಸ್ಮಾರ್ಟ್ ಗ್ಲಾಸ್ ಮಾರಾಟ ಮಾಡಲು ಯತ್ನಿಸುತ್ತಿವೆ ಎಂಬ ಮಾಹಿತಿ ಬಿಸಿಸಿಐಗೆ ಲಭಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಈ ಹೊಸ ನಿಯಮವನ್ನು ಉಲ್ಲಂಘಿಸುವ ಆಟಗಾರರು ಅಥವಾ ಸಿಬ್ಬಂದಿಗೆ ಭಾರೀ ಮೊತ್ತದ ದಂಡ ವಿಧಿಸುವುದರ ಜೊತೆಗೆ ತಕ್ಷಣದ ಅಮಾನತು ಶಿಕ್ಷೆಯನ್ನೂ ವಿಧಿಸಲಾಗುತ್ತದೆ ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. ಈಗಾಗಲೇ ನಡೆಯುತ್ತಿರುವ ಕ್ವಾಲಿಫೈಯರ್-2 ಹಾಗೂ ಫೈನಲ್ ಪಂದ್ಯಗಳ ವೇಳೆಯೂ ಸ್ಮಾರ್ಟ್ ಗ್ಲಾಸ್ ಮತ್ತು ಹೈ-ಟೆಕ್ ಗ್ಲಾಸ್ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಬಳಸುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದರ ಬೆನ್ನಲ್ಲೇ ಪಂದ್ಯಗಳ ಸಮಯದಲ್ಲಿ ಮೊಬೈಲ್ ಬಳಕೆಯ ಮೇಲೂ ಬಿಸಿಸಿಐ ಮತ್ತಷ್ಟು ಕಣ್ಣಿಟ್ಟಿದೆ. ಐಪಿಎಲ್ ನಿಯಮಗಳ ಪ್ರಕಾರ ಪಂದ್ಯ ನಡೆಯುವ ವೇಳೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ.