ಮಂಗಳೂರು: ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್ಜೆಇಸಿ) “ಗೋ ಫಾರ್ ಗೋಲ್ಡ್–2026” ಎಂಬ ತನ್ನ ವಾರ್ಷಿಕ ಅಥ್ಲೆಟಿಕ್ ಮೀಟ್ ಅನ್ನು 2026 ಏಪ್ರಿಲ್ 07 ರಂದು ಮಂಗಳವಾರ ಬೆಳಿಗ್ಗೆ 9:00 ಗಂಟೆಗೆ ಕಾಲೇಜಿನ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಿತು. ಈ ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ವಿಭಾಗ ಹಾಗೂ ಸ್ಪೋರ್ಟ್ಸ್ & ವೆಲ್ನೆಸ್ ವಿಭಾಗ ಆಯೋಜಿಸಿತು.



ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಹಾಗೂ ಬ್ಯಾಡಿ ಝೋನ್ ಸ್ಪೋರ್ಟ್ಸ್ ಕ್ಲಬ್ನ ಸಹ-ಸ್ಥಾಪಕ ಮತ್ತು ಸಿಇಒ ಆಗಿರುವ ಮೋಹಿತ್ ಕಾಮತ್ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.



ಈ ಕಾರ್ಯಕ್ರಮದಲ್ಲಿ ಎಸ್ಜೆಇಸಿ ನಿರ್ದೇಶಕರಾದ ವಂ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ, ಪ್ರಾಂಶುಪಾಲರಾದ ಡಾ. ರಿಯೋ ಡಿ’ಸೋಜಾ, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ಕೆ. ಜ್ಯೋತಿ, ಸ್ಪೋರ್ಟ್ಸ್ & ವೆಲ್ನೆಸ್ ಗುಂಪಿನ ಅಧ್ಯಕ್ಷೆ ಪ್ರಿಯಾ ಮಿರಾಂಡಾ, ಸಂಚಾಲಕರಾದ ಚಿತ್ತರಂಜನ್, ಸಹ ಸಂಚಾಲಕರಾದ ಹಿಮಾನಿ ಕಿಶನ್ ರಾಜ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ವನೀಷಾ ವಿ ರೊಡ್ರಿಗಸ್ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಿಂದ ಉತ್ಸಾಹಭರಿತ ಹಾಗೂ ವರ್ಣರಂಜಿತ ಮರ್ಚ್ ಪಾಸ್ಟ್ ಕಾರ್ಯಕ್ರಮ ನಡೆಯಿತು. ನಂತರ ಗಣ್ಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿತು. ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮುಖ್ಯ ಅತಿಥಿಗೆ ದೀಪಧಾರಿತ ಜ್ಯೋತಿಯನ್ನು ಹಸ್ತಾಂತರಿಸಿದ ನಂತರ, ಮುಖ್ಯ ಅತಿಥಿಗಳು ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಡಾ. ಕೆ. ಜ್ಯೋತಿ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿ ಸಭಿಕರನ್ನು ಸ್ವಾಗತಿಸಿದರು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋಹಿತ್ ಕಾಮತ್ ಅವರು ವಿದ್ಯಾರ್ಥಿಗಳು ತಮ್ಮ ದೇಹದ ತಾಕತ್ತಿಗಾಗಿ ಕ್ರೀಡೆಯನ್ನು ಆರಿಸಿಕೊಳ್ಳಬೇಕು ಎಂದು ತಿಳಿಸಿದರು. ಕ್ರೀಡೆಯ ಮಹತ್ವ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳ ಕುರಿತು ಅವರು ವಿವರಿಸಿದರು.


ಉದ್ಘಾಟನಾ ಸಮಾರಂಭದ ನಂತರ ದಿನಪೂರ್ತಿ ವಿವಿಧ ಅಥ್ಲೆಟಿಕ್ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು. ಕ್ರೀಡಾ ಪ್ರತಿಜ್ಞೆಯನ್ನು ತೃತೀಯ ವರ್ಷದ ಸಿಎಸ್ಇ ವಿದ್ಯಾರ್ಥಿನಿ ಟ್ರಿವಿಯಾ ಕ್ರೇಡಾ ವೇಗಾಸ್ ಅವರು ವಾಚಿಸಿದರು. ಹಿಮಾನಿ ಕಿಶನ್ ರಾಜ್ ಅವರು ಧನ್ಯವಾದಗಳನ್ನು ಅರ್ಪಿಸಿದರು. ಜೋಯೆಲ್ ಡಿ’ಮೆಲ್ಲೊ ಮತ್ತು ಫ್ಲಾರೆನ್ಸ್ ನಿಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು. ಸಮಾರೋಪ ಸಮಾರಂಭವು ಬಹುಮಾನ ವಿತರಣೆ ಮತ್ತು ಡಿಜೆ ಕಾರ್ಯಕ್ರಮದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

