ಪ್ಯಾರಿಸ್: 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಒಂದೇ ದಿನದಲ್ಲಿ ತನ್ನ ನಾಲ್ಕನೇ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ನಾಲ್ಕನೇ ಪದಕದ ರೂಪದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಒಟ್ಟು 24 ಸುತ್ತುಗಳಲ್ಲಿ 234.9 ಅಂಕಗಳನ್ನು ಕಲೆಹಾಕಿದ ಮನೀಶ್, ಭಾರತಕ್ಕೆ ನಾಲ್ಕನೇ ಪದಕ ಗೆದ್ದುಕೊಟ್ಟಿದ್ದಾರೆ.

ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದ ಮನೀಶ್ ನರ್ವಾಲ್ ಒಟ್ಟು 234.9 ಅಂಕ ಗಳಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದರು. ಆದರೆ ಈ ಬಾರಿ ಪದಕದ ಬಣ್ಣ ಬದಲಾಗಿದ್ದು, ಮನೀಶ್ ಕೊರಳಿಗೆ ಚಿನ್ನದ ಬದಲು ಬೆಳ್ಳಿ ಪದಕ ಬಿದ್ದಿದೆ. ಇದರೊಂದಿಗೆ ಮನೀಶ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಬಹು ಪದಕಗಳನ್ನು ಗೆದ್ದ ಏಕೈಕ ಆರನೇ ಭಾರತೀಯ ಅಥ್ಲೀಟ್ ಎನಿಸಿಕೊಂಡರು.

ಇದು ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಸಿಕ್ಕಿರುವ ನಾಲ್ಕನೇ ಪದಕವಾಗಿದ್ದು, ಶೂಟಿಂಗ್ ಒಂದರಲ್ಲೇ ಲಭಿಸಿದ ಮೂರನೇ ಪದಕವಾಗಿದೆ.