ಮುಂಬಯಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪುರುಷರ 50 ಮೀ. ರೈಫಲ್​ 3 ಪೊಸಿಷನ್​ ಶೂಟಿಂಗ್​ನಲ್ಲಿ ಕಂಚು ಗೆದ್ದ ಮಹಾರಾಷ್ಟ್ರದ 28 ವರ್ಷದ ಸ್ವಪ್ನಿಲ್​ ಕುಸಾಲೆ ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ 1 ಕೋಟಿ ಬಹುಮಾನ ಪ್ರಕಟಿಸಿದ್ದಾರೆ.

ಕೊಲ್ಹಾಪುರ ಜಿಲ್ಲೆಯ ಕಂಬಲ ವಾಡಿಯವರಾದ ಸ್ವಪ್ನಿಲ್​, 2009ರಲ್ಲಿ ಮಹಾರಾಷ್ಟ್ರದ ಕ್ರೀಡಾ ಪ್ರಭೋದಿನಿ ಯೋಜನೆಯಡಿ ಕ್ರೀಡಾ ತರಬೇತಿಗೆ ಆಯ್ಕೆಯಾಗಿದ್ದರು.

ಗುರುವಾರ ನಡೆದ ಫೈನಲ್​ ಸ್ಪರ್ಧೆಯಲ್ಲಿ ಅವರು ಒಟ್ಟು 451.4 ಅಂಕ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಸ್ವಪ್ನಿಲ್​ ಕುಸಾಲೆಗೆ ಮಹಾರಾಷ್ಟ್ರ ಸರ್ಕಾರದ ಬಹುಮಾನ ಮೊತ್ತದ ಹೊರತಾಗಿಯೂ ಕೇಂದ್ರ ಸರ್ಕಾರದಿಂದ 30 ಲಕ್ಷ ರೂ. ಮತ್ತು ಭಾರತೀಯ ಒಲಿಂಪಿಕ್ಸ್​ ಸಂಸ್ಥೆಯಿಂದ 50 ಲಕ್ಷ ರೂ. ಬಹುಮಾನ ಸಿಗಲಿದೆ.

ಸ್ವಪ್ನಿಲ್​ ಕುಸಾಲೆಗೆ ರಿಲಯನ್ಸ್ ಫೌಂಡೇಶನ್  ಸಂಸ್ಥಾಪಕಿ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯ ಸದಸ್ಯೆಯಾಗಿರುವ ನೀತಾ ಅಂಬಾನಿ ಅಭಿನಂದನೆ ಸಲ್ಲಿಸಿದ್ದಾರೆ.