ಮೈಸೂರು: ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಎಫ್-57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಪ್ಯಾರಾ ಅಥ್ಲೀಟ್ ಶಿಲ್ಪಾ ಕೆ. ಶೈಲಾ ಅವರ ಸಾಧನೆಗೆ ಪ್ರಶಂಸೆಯ ಮಾಹಾಪೂರ ಹರಿದು ಬರುತ್ತಿದೆ. ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಶಿಲ್ಪಾ ಅವರ ನಿವಾಸದಲ್ಲಿ ಕುಟುಂಬ ಹಾಗೂ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಶಿಲ್ಪಾ ನಾಲ್ಕನೇ ವಯಸ್ಸಿನಲ್ಲೇ ಅಪಘಾತದಲ್ಲಿ ಎಡಗಾಲನ್ನು ಕಳೆದುಕೊಂಡಿದ್ದರು. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಎರಡು ತಿಂಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಕೃತಕ ಕಾಲು ಅಳವಡಿಸಲಾಗಿತ್ತು. ದೈಹಿಕ ಸವಾಲಿನ ನಡುವೆಯೂ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಶಿಲ್ಪಾ ನಿರಂತರ ಪರಿಶ್ರಮದ ಮೂಲಕ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯ ಹಾಗೂ ದೇಶದ ಹೆಮ್ಮೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಿಲ್ಪಾ ಅವರ ತಂದೆ ಕೆ. ಶೈಲಾ, “ಸಣ್ಣ ವಯಸ್ಸಿನಿಂದಲೇ ಆಕೆಗೆ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಇತ್ತು. ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡುತ್ತಾಳೆ ಎಂದು ನಾವು ನಿರೀಕ್ಷಿಸಿರಲಿಲ್ಲ. ವಿದೇಶಕ್ಕೆ ತೆರಳಲು ಆರ್ಥಿಕ ಸಂಕಷ್ಟ ಎದುರಾಗಿತ್ತು. ಸರ್ಕಾರದಿಂದ ಅಗತ್ಯ ಸಹಕಾರವೂ ಸಿಗಲಿಲ್ಲ. ಆದರೂ ಕೆಲ ಅಧಿಕಾರಿಗಳ ಪ್ರೋತ್ಸಾಹದಿಂದ ವಿದೇಶಕ್ಕೆ ತೆರಳಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ದೇಶದ ವಿವಿಧ ಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಜಯಗಳಿಸಿದ್ದ ಆಕೆ, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಗೆದ್ದು ನಮ್ಮ ಕನಸನ್ನು ನನಸು ಮಾಡಿದ್ದಾಳೆ. ಮಗಳ ಸಾಧನೆ ನಮ್ಮ ಬದುಕನ್ನು ಸಾರ್ಥಕಗೊಳಿಸಿದೆ,” ಎಂದು ಭಾವುಕರಾದರು.

ತಾಯಿ ಶಾಂತಾ ಮಾತನಾಡಿ, “ಚಿಕ್ಕಂದಿನಿಂದಲೇ ಶಿಲ್ಪಾ ತುಂಬಾ ಚಟುವಟಿಕೆಯ ಸ್ವಭಾವದವಳು. ಓಡಾಡಲು ಕಷ್ಟವಾಗಿದ್ದರೂ ನೃತ್ಯ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸುತ್ತಿದ್ದಳು. ಕಾಲು ಇಲ್ಲದಿರುವುದನ್ನು ಅವಳು ಎಂದಿಗೂ ಕೊರತೆಯಾಗಿ ಭಾವಿಸಿರಲಿಲ್ಲ. ಇಂದು ಇಷ್ಟೊಂದು ದೊಡ್ಡ ಸಾಧನೆ ಮಾಡಿರುವುದು ನಮ್ಮ ಪಾಲಿನ ಪುಣ್ಯ,” ಎಂದು ಸಂತಸ ವ್ಯಕ್ತಪಡಿಸಿದರು.