ಮೈಸೂರು: ಅಂಗವೈಕಲ್ಯವನ್ನು ಮೆಟ್ಟಿನಿಂತು ಸತತ ಪರಿಶ್ರಮದಿಂದ ಮುನ್ನಡೆದಿರುವ ಮೈಸೂರು ಜಿಲ್ಲೆಯ ಕೆ.ಎಸ್. ಶಿಲ್ಪಾ, ಸ್ಕಾಟ್ಲೆಂಡ್‌ನ ಗ್ಲಾಸ್ಗೊನಲ್ಲಿ ಆರಂಭವಾಗಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಕೂಟಕ್ಕೆ ಅರ್ಹತೆ ಪಡೆದ ದೇಶದ ಇಬ್ಬರು ಮಹಿಳಾ ಪ್ಯಾರಾ ಅಥ್ಲೀಟ್‌ಗಳಲ್ಲಿ ಇವರೂ ಒಬ್ಬರಾಗಿದ್ದು, ಎಫ್‌–57 ವಿಭಾಗದ ಶಾಟ್‌ಪಟ್ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ದುಬೈನಲ್ಲಿ ನಡೆದ 17ನೇ ಫಝಾ ಅಂತರರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅವರು ಕಾಮನ್‌ವೆಲ್ತ್‌ಗೆ ಅರ್ಹತೆ ಪಡೆದುಕೊಂಡಿದ್ದರು.

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಕಂಚಗಾರಕೊಪ್ಪಲಿನ ಶೈಲ ಮತ್ತು ಶಾಂತಾ ದಂಪತಿಯ ಪುತ್ರಿಯಾದ ಶಿಲ್ಪಾ, ನಾಲ್ಕು ವರ್ಷದ ಮಗುವಾಗಿದ್ದಾಗಲೇ ಸಂಭವಿಸಿದ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದರು. ಶೈಕ್ಷಣಿಕವಾಗಿ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಮುಗಿಸಿ ಮೈಸೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಅವರು, ಕ್ರೀಡೆಯ ಮೇಲಿನ ಆಸಕ್ತಿಯಿಂದ 2019ರಲ್ಲಿ ತಮ್ಮ 29ನೇ ವಯಸ್ಸಿನಲ್ಲಿ ಕ್ರೀಡಾ ರಂಗಕ್ಕೆ ಕಾಲಿಟ್ಟರು.

ಆರಂಭದಲ್ಲಿ ಸಿಟಿಂಗ್‌ ವಾಲಿಬಾಲ್‌ ಆಡುತ್ತಿದ್ದ ಶಿಲ್ಪಾ, ನಂತರ ತರಬೇತುದಾರರ ಸಲಹೆಯಂತೆ ಶಾಟ್‌ಪಟ್ ಅಭ್ಯಾಸ ಆರಂಭಿಸಿದರು. ಕ್ರೀಡಾಸಾಧನೆಗಾಗಿ ಶಿಕ್ಷಕಿ ವೃತ್ತಿಯನ್ನು ತೊರೆದು ಬೆಂಗಳೂರಿಗೆ ಸ್ಥಳಾಂತರಗೊಂಡ ಅವರು, ಕಂಠೀರವ ಕ್ರೀಡಾಂಗಣದಲ್ಲಿ ನಿತ್ಯ ಕಠಿಣ ಅಭ್ಯಾಸ ನಡೆಸುವ ಮೂಲಕ ಅಲ್ಪಾವಧಿಯಲ್ಲೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದ್ದಾರೆ.

ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಶಿಲ್ಪಾ ಅವರಿಗೆ ಸೂಕ್ತ ಪ್ರಾಯೋಜಕತ್ವದ ಕೊರತೆಯಿದ್ದು, ಇಂದಿಗೂ ಸಾಮಾನ್ಯ ದರ್ಜೆಯ ‘ಜೈಪುರ ಫುಟ್‌’ ಕೃತಕ ಕಾಲಿನಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ. ಕ್ರೀಡೆಗೆ ಸೂಕ್ತವಾದ ಆಧುನಿಕ ಕೃತಕ ಕಾಲು ಖರೀದಿಸಲು ಹಣಕಾಸಿನ ನೆರವಿನ ಹುಡುಕಾಟದಲ್ಲಿದ್ದಾರೆ. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಸದ್ಯ ಕಾಮನ್‌ವೆಲ್ತ್‌ನಲ್ಲಿ ದೇಶಕ್ಕೆ ಪದಕ ತಂದುಕೊಡುವ ಸನ್ನಾಹದಲ್ಲಿರುವ ಶಿಲ್ಪಾ, 2028ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತರಬೇಕೆಂಬ ಮಹತ್ವಾಕಾಂಕ್ಷೆಯ ಕನಸು ಹೊತ್ತಿದ್ದಾರೆ.