ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಪುರುಷರ ಡಬಲ್ಸ್‌ನ ಎರಡನೇ ಪಂದ್ಯ ರದ್ದಾಗಿದೆ.

ಜರ್ಮನಿಯ ಮಾರ್ವಿನ್ ಸೀಡೆಲ್ ಮತ್ತು ಮಾರ್ಕ್ ಲ್ಯಾಮ್ಸ್ಫೂಸ್ ಗಾಯದ ಕಾರಣದಿಂದ ಕ್ರೀಡಾಕುಟದಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಭಾರತದ ಜೋಡಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಮೊದಲ ಪಂದ್ಯದಲ್ಲಿ, ಭಾರತದ ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಆತಿಥೇಯ ಫ್ರೆಂಚ್ ಜೋಡಿಯಾದ ಕೊರ್ವಿ ಲ್ಯೂಕಾಸ್ ಮತ್ತು ಲೇಬರ್ ರೊನಾನ್ ವಿರುದ್ಧ 21-17, 21-14 ರಲ್ಲಿ ಜಯಗಳಿಸಿತ್ತು. ಅದೇ ಸಮಯದಲ್ಲಿ, ಈಗ ಫ್ರಾನ್ಸ್‌ನ ಕೊರ್ವಿ ಲುಕಾಸ್ ಮತ್ತು ಲೇಬರ್ ರೊನಾನ್ ಜೋಡಿ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ವಿರುದ್ಧ ಸೋತಿದೆ. ಹೀಗಾಗಿ ಸಾತ್ವಿಕ್ ಮತ್ತು ಚಿರಾಗ್ ಜೋಡಿ ತಮ್ಮ ಗುಂಪಿನಲ್ಲಿ ಟಾಪ್-2 ಸ್ಥಾನ ಪಡೆದುಕೊಂಡಿದೆ.

ಸಾತ್ವಿಕ್ ಮತ್ತು ಚಿರಾಗ್ ಜೋಡಿ ಟಾಪ್-2 ರೊಂದಿಗೆ ಗುಂಪು ಹಂತವನ್ನು ಕೊನೆಗೊಳಿಸಲಿದೆ. ಹೀಗಿರುವಾಗ ಈ ಜೋಡಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಸಾತ್ವಿಕ್ ಮತ್ತು ಚಿರಾಗ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.