ದುಬೈ: ಅಶ್ಲೀಲ ವರ್ತನೆ ತೋರಿದ ಕಾರಣದಿಂದ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಅಲ್-ನಾಸರ್ ತಂಡವು ಅಲ್ ಶಬಾಬ್ ತಂಡದ ವಿರುದ್ಧ 3-2 ಅಂತರದ ಗೆಲುವು ಸಾಧಿಸಿದ ನಂತರ ರೊನಾಲ್ಡೊ ಅಶ್ಲೀಲ ವರ್ತನೆ ತೋರಿದ್ದರು.
ಸೌದಿ ಫುಟ್ಬಾಲ್ ಫೆಡರೇಷನ್ನ ಶಿಸ್ತು ಮತ್ತು ನೀತಿ ಸಮಿತಿಯು ಕ್ರಿಸ್ಟಿಯಾನೊ ರೊನಾಲ್ಡೊಗೆ ಒಂದು ಪಂದ್ಯ ನಿಷೇಧ ವಿಧಿಸಿದೆ. ಪಂದ್ಯದ ಮುಕ್ತಾಯದ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ ಶಬಾಬ್ ತಂಡದ ಬೆಂಬಲಿಗರತ್ತ ಅಶ್ಲೀಲವಾಗಿ ಬೆರಳನ್ನು ತೋರಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ರೊನಾಲ್ಡೊ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು.
ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸೌದಿ ಫುಟ್ಬಾಲ್ ಫೆಡರೇಷನ್ಗೆ 10,000 ಸೌದಿ ರಿಯಲ್ಸ್ (2,666 ಡಾಲರ್) ಹಾಗೂ ದೂರು ದಾಖಲಿಸಿದ ಶುಲ್ಕವಾಗಿ ಅಲ್ ಶಬಾಬ್ ತಂಡಕ್ಕೆ 20,000 ಸೌದಿ ರಿಯಲ್ಸ್ ಪಾವತಿಸಬೇಕು ಎಂದು ಸಮಿತಿಯು ಸೂಚಿಸಿದೆ. ಈ ನಿರ್ಣಯವು ಅಂತಿಮವಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.