ಧರ್ಮಶಾಲಾ: ಐಪಿಎಲ್ 2026ರ ಮೊದಲ ಹೈವೋಲ್ಟೇಜ್ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ.

ಗುಜರಾತ್ ಟೈಟನ್ಸ್ ವಿರುದ್ಧ 92 ರನ್‌ಗಳ ಬೃಹತ್ ಗೆಲುವು ದಾಖಲಿಸಿದ ಆರ್‌ಸಿಬಿ, ಸತತ ಎರಡನೇ ಬಾರಿಗೆ ಟೂರ್ನಿಯ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಇಮಾನ್ವೆಂಟ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ನಲುಗಿ 19.3 ಓವರ್‌ಗಳಲ್ಲಿ ಕೇವಲ 162 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಒಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದಲ್ಲೇ ವೆಂಕಟೇಶ್ ಅಯ್ಯರ್ (19 ರನ್, 7 ಎಸೆತ) ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಕೇವಲ 38 ಎಸೆತಗಳಲ್ಲಿ 72 ರನ್ ಚಚ್ಚಿ ತಂಡಕ್ಕೆ ಬಲ ತುಂಬಿತು. ಕೊಹ್ಲಿ 43 ರನ್ (25 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರೆ, ಪಡಿಕ್ಕಲ್ 30 ರನ್ ಗಳಿಸಿ ಜೇಸನ್ ಹೋಲ್ಡರ್ ಎಸೆತದಲ್ಲಿ ನಿರ್ಗಮಿಸಿದರು.

3 ಎಸೆತಗಳ ಅಂತರದಲ್ಲಿ 2 ವಿಕೆಟ್ ಬಿದ್ದಾಗ ಕ್ರೀಸ್‌ಗೆ ಬಂದ ನಾಯಕ ರಜತ್ ಪಾಟೀದಾರ್ ಮತ್ತು ಕೃನಾಲ್ ಪಾಂಡ್ಯ ಜೋಡಿ ಜಿಟಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿತು. ಈ ಜೋಡಿ 4ನೇ ವಿಕೆಟ್‌ಗೆ 95 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಪಾಂಡ್ಯ 43 ರನ್ ಗಳಿಸಿ ಔಟಾದರು.

ಕೊನೆಯವರೆಗೂ ಅಬ್ಬರಿಸಿದ ನಾಯಕ ರಜತ್ ಪಾಟೀದಾರ್ ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ ಅಜೇಯ 93 ರನ್ ಚಚ್ಚಿ ತಂಡದ ಮೊತ್ತವನ್ನು ಹಿಮಾಲಯದಷ್ಟೇ ಎತ್ತರಕ್ಕೆ ಕೊಂಡೊಯ್ದರು. ಜಿತೇಶ್ ಶರ್ಮಾ ಅಜೇಯ 15 ರನ್ ಸಿಡಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಬೃಹತ್ ಮೊತ್ತದ ಒತ್ತಡದೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಗುಜರಾತ್ ಟೈಟನ್ಸ್ ಪವರ್ ಪ್ಲೇ ಮುಗಿಯುವುದರೊಳಗೆ 5 ವಿಕೆಟ್ ಕಳೆದುಕೊಂಡು ತೀವ್ರ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ಸಾಯಿ ಸುದರ್ಶನ್ ದುರಾದೃಷ್ಟಕರ ರೀತಿಯಲ್ಲಿ ಹಿಟ್ ವಿಕೆಟ್ ಆಗಿ ಔಟಾದರೆ, ನಾಯಕ ಶುಭ್ಮನ್ ಗಿಲ್ ಕೇವಲ 2 ರನ್‌ಗಳಿಗೆ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು.

ಸ್ಫೋಟಕ ಆಟಕ್ಕೆ ಕೈಹಾಕಿದ ಜೋಸ್ ಬಟ್ಲರ್ 11 ಎಸೆತಗಳಲ್ಲಿ 29 ರನ್ ಗಳಿಸಿ ಹ್ಯಾಜಲ್‌ವುಡ್‌ಗೆ ಬೌಲ್ಡ್ ಆದರು. ನಂತರ ಬಂದ ನಿಶಾಂತ್ ಸಿಂಧು (5), ವಾಷಿಂಗ್ಟನ್ ಸುಂದರ್ (8), ಜೇಸನ್ ಹೋಲ್ಡರ್ (0) ಮತ್ತು ರಶೀದ್ ಖಾನ್ (8) ಬಂದ ದಾರಿಯಲ್ಲೇ ಮರಳಿದ್ದರಿಂದ ಗುಜರಾತ್ ತಂಡ 88 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ನೂರರ ಗಡಿ ದಾಟುವುದು ಅನುಮಾನ ಎನಿಸಿತ್ತು.

ಈ ಹಂತದಲ್ಲಿ ಆರ್‌ಸಿಬಿ ದಾಖಲೆಯ ಜಯ ಗಳಿಸಲಿದೆ ಎಂದು ಭಾವಿಸಲಾಗಿತ್ತು. ಆದರೆ 9ನೇ ವಿಕೆಟ್‌ಗೆ ಜೊತೆಯಾದ ರಾಹುಲ್ ತೆವಾಟಿಯಾ ಮತ್ತು ಮೊಹಮ್ಮದ್ ಸಿರಾಜ್ ಜೋಡಿ ಆರ್‌ಸಿಬಿ ಗೆಲುವಿನ ಸುಲಭ ಲೆಕ್ಕಾಚಾರವನ್ನು ಸ್ವಲ್ಪ ತಡವಾಗಿಸಿತು. ಸಿರಾಜ್ ಜೊತೆಗೂಡಿ 68 ರನ್‌ಗಳ ಜೊತೆಯಾಟವಾಡಿದ ತೆವಾಟಿಯಾ 43 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 68 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಅಂತಿಮವಾಗಿ 19ನೇ ಓವರ್‌ನಲ್ಲಿ ತೆವಾಟಿಯಾ ವಿಕೆಟ್ ಪಡೆಯುವಲ್ಲಿ ಭುವಿ ಯಶಸ್ವಿಯಾದರು. 20ನೇ ಓವರ್‌ನ 3ನೇ ಎಸೆತದಲ್ಲಿ ಕೃನಾಲ್ ಪಾಂಡ್ಯ ಅವರು ಸಿರಾಜ್ (5) ವಿಕೆಟ್ ಪಡೆಯುವುದರೊಂದಿಗೆ ಗುಜರಾತ್ ಕಥೆ ಮುಗಿಯಿತು.

ಬೆಂಗಳೂರು ತಂಡದ ಪರ ಜೇಕಬ್ ಡಫಿ 39 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಅತ್ಯಂತ ಆಲ್ರೌಂಡ್ ಪ್ರದರ್ಶನ ನೀಡಿದ ಕೃನಾಲ್ ಪಾಂಡ್ಯ (16ಕ್ಕೆ 2), ರಸಿಕ್ ಸಲಾಮ್ (24ಕ್ಕೆ 2) ಹಾಗೂ ಅನುಭವಿ ಭುವನೇಶ್ವರ್ ಕುಮಾರ್ (28ಕ್ಕೆ 2) ತಲಾ ಎರಡು ವಿಕೆಟ್ ಕಲೆಹಾಕಿ ಆರ್‌ಸಿಬಿ ತಂಡವನ್ನು ಅತ್ಯಂತ ಸಲೀಸಾಗಿ ಫೈನಲ್ ತಲುಪಿತು.