ನವದೆಹಲಿ: ಅಫಘಾನಿಸ್ತಾನ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಅವರು ನೇಮಕಗೊಂಡಿದ್ದಾರೆ.
ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಸರಣಿಯಲ್ಲಿ ಶ್ರೀಧರ್ ಆಫ್ಘನ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಶ್ರೀಧರ್ ಭಾರತ ಕ್ರಿಕೆಟ್ ತಂಡದಲ್ಲಿ 2014ರಿಂದ ಸತತ 7 ವರ್ಷಗಳ ಕಾಲ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ರವಿಶಾಸ್ತ್ರಿ ಕೋಚ್ ಆಗಿದ್ದ ವೇಳೆ ಅವರ ಸಹಾಯಕ ಸಿಬ್ಬಂದಿಯ ಭಾಗವಾಗಿ ಕೆಲಸ ಮಾಡಿದ್ದರು. ನ್ಯೂಜಿಲ್ಯಾಂಡ್ ವಿರುದ್ಧ ಅಫಫ್ಘಾನಿಸ್ತಾನ ಒಂದು ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಹೈದರಾಬಾದ್ ಮೂಲದ ಆರ್.ಶ್ರೀಧರ್ 35 ಪ್ರಥಮ ದರ್ಜೆ ಮತ್ತು 15 ‘ಎ’ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2019ರ ಏಕದಿನ ವಿಶ್ವಕಪ್ ಮತ್ತು 2016 ಮತ್ತು 2021ರ ಟಿ-20 ವಿಶ್ವಕಪ್ಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ(ಎನ್ಸಿಎ) 2014 ರ ವಿಶ್ವಕಪ್‌ನಲ್ಲಿ ಭಾರತ ಅಂಡರ್-19 ತಂಡದೊಂದಿಗೆ ಮತ್ತು ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದೊಂದಿಗೂ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಶ್ರೀಧರ್ ಲೆವೆಲ್-3 ಸರ್ಟಿಫೈಡ್ ಕೋಚ್ ಆಗಿದ್ದಾರೆ. ಸದ್ಯ ಕಿವೀಸ್ ಮತ್ತು ದಕ್ಷಿಣ ಆಫ್ರಿಕಾ ಸರಣಿಗೆ ಮಾತ್ರ ಸಹಾಯಕ ಕೋಚ್ ಆಗಿರುವ ಶ್ರೀಧರ್ ಭವಿಷ್ಯದಲ್ಲಿ ದೀರ್ಘಕಾಲದವರೆಗೆ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಹೇಳಿಯಲ್ಲಿ ತಿಳಿಸಿದೆ.

