ಪ್ಯಾರಿಸ್ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧು ಭರ್ಜರಿ ಜಯ ಸಾಧಿಸಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಈ ಪಂದ್ಯದಲ್ಲಿ ಎಸ್ಟೋನಿಯಾದ ಕ್ರಿಸ್ಟಿನ್ ಕೂಬ ಮಣಿಸಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಮುಂದಿನ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದಾರೆ.
ಆರಂಭದಿಂದಲೇ ಉತ್ತಮ ನಿಯಂತ್ರಣ ಪ್ರದರ್ಶಿಸಿದ್ದ ಸಿಂಧು, ಮೊದಲ ಸೆಟ್ನಲ್ಲೇ ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಮೊದಲ ಸೆಟ್ ಅನ್ನು 21-9 ಅಂಕಗಳ ಅಂತರದಿಂದ ಗೆದ್ದುಕೊಂಡರು.
ಇನ್ನು ದ್ವಿತೀಯ ಸೆಟ್ನ ಆರಂಭದಲ್ಲಿ ಕ್ರಿಸ್ಟಿನ್ ಕೂಬ ಕಡೆಯಿಂದ ಉತ್ತಮ ಪೈಪೋಟಿ ಕಂಡು ಬಂತು. ಆದರೆ ಅನುಭವಿ ಆಟಗಾರ್ತಿಯಾಗಿರುವ ಪಿವಿ ಸಿಂಧು ಚಾಣಾಕ್ಷ ಆಟದೊಂದಿಗೆ ಆರಂಭಿಕ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದರು. ಪರಿಣಾಮ ಕೂಬ 6 ಅಂಕಗಳನ್ನು ಕಲೆಹಾಕುವಷ್ಟರಲ್ಲಿ ಭಾರತೀಯ ತಾರೆ 15 ಪಾಯಿಂಟ್ಸ್ ಗಳಿಸಿದ್ದರು.
ಇದರ ನಡುವೆ ಲಯ ಕಳೆದುಕೊಂಡ ಕ್ರಿಸ್ಟಿನ್ ಕೂಬ ಸತತ ತಪ್ಪುಗಳನ್ನು ಎಸೆಗಿದರೆ, ಭಾರತೀಯ ತಾರೆ ಆಕ್ರಮಣಕಾರಿ ಆಟ ಮುಂದುವರೆಸಿದರು. ಪರಿಣಾಮ ದ್ವಿತೀಯ ಸೆಟ್ ಅನ್ನು ಸಿಂಧು 21-10 ಅಂಕಗಳ ಅಂತರದಿಂದ ಗೆದ್ದುಕೊಂಡರು. ಈ ಗೆಲುವಿನೊಂದಿಗೆ ಪಿವಿ ಸಿಂಧು ಪ್ರಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ.

