ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನ ಎರಡನೇ ದಿನ ಭಾರತಕ್ಕೆ ಮೂರನೇ ಪದಕ ಸಿಕ್ಕಿದೆ. ಮೂರನೇ ಪದಕದ ರೂಪದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದಿದ್ದಾರೆ.

ಮಹಿಳೆಯರ 100 ಮೀಟರ್ ಟಿ-35 ಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಪ್ರೀತಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಇದರೊಂದಿಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಟ್ರ್ಯಾಕ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರಿಗೂ ಮೊದಲು ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್‌ಎಚ್ 1 ಫೈನಲ್ ಸ್ಪರ್ಧೆಯಲ್ಲಿ ಅವನಿ ಲೆಖರಾ ಚಿನ್ನದ ಪದಕ ಗೆದ್ದಿದ್ದರೆ, ಮೋನಾ ಅಗರ್ವಾಲ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದರು.

ಮಹಿಳೆಯರ 100 ಮೀಟರ್ಸ್ (T35) ಸ್ಪರ್ಧೆಯಲ್ಲಿ 14.21 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಪ್ರೀತಿ ಪಾಲ್ ಕಂಚು ಗೆದ್ದಿದ್ದಾರೆ.

ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ T35 ವರ್ಗವು ಹೈಪರ್ಟೋನಿಯಾ, ಅಟಾಕ್ಸಿಯಾ ಮತ್ತು ಅಥೆಟೋಸಿಸ್ ಮತ್ತು ಸೆರೆಬ್ರಲ್ ಪಾಲ್ಸಿ ಮುಂತಾದ ಸಮನ್ವಯ ಅಸ್ವಸ್ಥತೆಗಳನ್ನು ಹೊಂದಿರುವ ಪ್ಯಾರಾ ಕ್ರೀಡಾಪಟುಗಳಿಗೆ ನಡೆಸುವ ಸ್ಪರ್ಧೆಯಾಗಿದೆ.

— Paralympics 2024 Updates (@Badminton7799) August 30, 2024