ಪ್ಯಾರಿಸ್ ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಕ್ರೀಡಾಕೂಟ ಆರಂಭವಾಗಲಿದೆ. ಫ್ರಾನ್ಸ್ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಇದು ಮೂರನೇ ಬಾರಿ. ಹೀಗಾಗಿ ಈ ಕ್ರೀಡಾಕೂಟವನ್ನು ಇನ್ನಷ್ಟು ವಿಶೇಷಗೊಳಿಸುವ ಸಲುವಾಗಿ ಆಯೋಜಕರು ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ.
ಜುಲೈ 26 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದಲ್ಲಿ ನಡೆಯದೆ ಸೀನ್ ನದಿಯ ದಡದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭವು ದೋಣಿ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ಸುಮಾರು ಮೂರು ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮೂರು ಸಾವಿರ ಕಲಾವಿದರು ಪ್ರದರ್ಶನವನ್ನು ಪ್ರಸ್ತುತಪಡಿಸಲಿದ್ದಾರೆ. ಆದಾಗ್ಯೂ, ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಈ ಸ್ಥಳವನ್ನು ಸಹ ಬದಲಾಯಿಸಬಹುದು ಮತ್ತು ಉದ್ಘಾಟನಾ ಸಮಾರಂಭವನ್ನು ಐಫೆಲ್ ಟವರ್ ಮುಂಭಾಗದಲ್ಲಿ ನಡೆಸಬಹುದು ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಭದ್ರತೆ ಅಥವಾ ಇನ್ನಾವುದೇ ಕಾರಣದಿಂದ ಸಾಧ್ಯವಾಗದಿದ್ದರೆ, ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸುವ ಆಯ್ಕೆಯನ್ನು ಸಂಘಟಕರು ಇಟ್ಟುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾಲ್ಕು ಹೊಸ ಕ್ರೀಡೆಗಳನ್ನು ಸೇರಿಸಲಾಗಿದೆ. ಬ್ರೇಕ್ ಡ್ಯಾನ್ಸ್ ಇದರಲ್ಲಿ ಪಾದಾರ್ಪಣೆ ಮಾಡಲಿದ್ದು, ಸ್ಕೇಟ್ ಬೋರ್ಡಿಂಗ್, ಸ್ಪೋರ್ಟ್ ಕ್ಲೈಂಬಿಂಗ್ ಮತ್ತು ಸರ್ಫಿಂಗ್ ಕೂಡ ಇದರಲ್ಲಿರಲಿದೆ.

