ಪ್ಯಾರಿಸ್:‌ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು (ಆ.11) ತೆರೆ ಬೀಳಲಿದೆ. ಸ್ಟೇಟ್ ಡಿ ಫ್ರಾನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಲ್ಲಾ ದೇಶಗಳ ಆಯ್ದ ಕ್ರೀಡಾಪಟುಗಳು ಕಾಣಿಸಿಕೊಳ್ಳಲಿದ್ದಾರೆ.

ಭಾರತೀಯ ಕಾಲಮಾನ 12.30 AM ಗೆ ಶುರುವಾಗಲಿರುವ ಈ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಹಾಗೂ ಶೂಟರ್ ಮನು ಭಾಕರ್ ಕಾಣಿಸಿಕೊಳ್ಳಲಿದ್ದಾರೆ.

ಈ ಸಮಾರಂಭದಲ್ಲಿ “ನೂರಕ್ಕೂ ಹೆಚ್ಚು ಪ್ರದರ್ಶಕರು, ಅಕ್ರೋಬ್ಯಾಟ್‌ಗಳು, ನೃತ್ಯಗಾರರು ಮತ್ತು ಸರ್ಕಸ್ ಕಲಾವಿದರು” ಭಾಗವಹಿಸಲಿದ್ದಾರೆ ಎಂದು ಸಂಘಟಕರ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಾಗೆಯೇ ಅಂತಿಮ ಕಾರ್ಯಕ್ರಮದಲ್ಲಿ ಸಂಗೀತ ಪ್ರದರ್ಶನಗಳು ಇರಲಿವೆ.

ಶನಿವಾರದ ಪಂದ್ಯಗಳೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಈ ಬಾರಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿರುವುದು ಭಾರತದ ಸರ್ವಶ್ರೇಷ್ಠ ಸಾಧನೆ. ಹಾಗೆಯೇ ಶೂಟಿಂಗ್​ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಒಟ್ಟು 6 ಪದಕಗಳೊಂದಿಗೆ ಭಾರತ ತಂಡವು ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನವನ್ನು ಅಂತ್ಯಗೊಳಿಸಿದೆ.