ಪ್ಯಾರಿಸ್: ಈ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಗಾಯದಿಂದಾಗಿ ಕ್ವಾರ್ಟರ್ ಫೈನಲ್‌ಗೂ ಮುನ್ನವೇ ನಿರ್ಗಮಿಸಿದ 24 ಗ್ರಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್ ಎಟಿಪಿ ವಿಶ್ವ ಟೆನಿಸ್ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸೋಮವಾರ ನೂತನ ರ್‍ಯಾಂಕಿಂಗ್‌ ಪಟ್ಟಿ ಪ್ರಕಟಗೊಂಡಿದ್ದು, ಫ್ರೆಂಚ್ ಓಪನ್ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ 2ನೇ ಸ್ಥಾನಕ್ಕೇರಿದ್ದಾರೆ. ಸೆಮಿ ಫೈನಲ್‌ನಲ್ಲಿ ಸೋತಹೊರತಾಗಿಯೂ ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಇಟಲಿಯ 22ರ ಯಾನ್ನಿಕ್ ಸಿನ್ನರ್ ಅಗ್ರಸ್ಥಾನಕ್ಕೇರಿದ್ದಾರೆ.

ಇನ್ನು, ಡಬ್ಲ್ಯುಟಿಎ ಮಹಿಳಾ ವಿಶ್ವ ರ್‍ಯಾಂಕಿಂಗ್‌ನಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಅಮೆರಿಕದ ಗಾಫ್, ಸಬಲೆಂಕಾ, ರಬೈಕೆನಾ ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ. ಫ್ರೆಂಚ್ ಓಪನ್ ರನ್ನರ್-ಅಪ್, ಇಟಲಿಯ ಪೌಲಿನಿ ಮೊದಲ ಬಾರಿ ಅಗ್ರ -10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಜೀವನಶ್ರೇಷ್ಠ 7ನೇ ಸ್ಥಾನನಕ್ಕೇರಿದ್ದಾರೆ.