ಬೆಂಗಳೂರು :ಪ್ಯಾರಿಸ್ ಒಲಿಂಪಿಕ್ಸ್​​ 2024ರ ಸ್ಪರ್ಧೆಗಳು ನಿನ್ನೆ ಸಂಜೆಯ ವೇಳೆಗೆ ಮುಕ್ತಾಯಗೊಂಡಿದ್ದು ಪದಕ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಕೂದಲೆಳೆಯ ಅಂತರದಿಂದ ಹಿಂದಿಕ್ಕಿದೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ ನಡುವಿನ ಮಹಿಳಾ ಬ್ಯಾಸ್ಕೆಟ್​​ಬಾಲ್​ ಒಲಿಂಪಿಕ್ಸ್​ನ ಕೊನೇ ಸ್ಪರ್ಧೆಯಾಗಿತ್ತು. ಅಲ್ಲಿ ಅಮೆರಿಕ ಚಿನ್ನ ಗೆದ್ದುಕೊಂಡಿತ್ತು. ಅಲ್ಲಿ ತನಕ ಚೀನಾ 40 ಚಿನ್ನದೊಂದಿಗೆ ಮೊದಲ ಸ್ಥಾನದಲ್ಲಿತ್ತು.

ಅಮೆರಿಕ ಬಾಸ್ಕೆಟ್​ಬಾಲ್​ ಗೆಲ್ಲುವುದರೊಂದಿಗೆ ಅಮೆರಿಕ 40 ಚಿನ್ನ ಗೆದ್ದುಕೊಂಡಿತು. ಜತೆಗೆ ಪದಕ ಪಟ್ಟಿಯಲ್ಲಿ ಬೆಳ್ಳಿ ಹಾಗೂ ಕಂಚಿನ ಸಹಾಯದಿಂದ ಅಗ್ರಸ್ಥಾನಕ್ಕೆ ಏರಿತು. ಈ ಮೂಲಕ ಅಮೆರಿಕನ್ನರು ಸತತ ನಾಲ್ಕನೇ ಬಾರಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು.

ಫ್ರಾನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಅಮೆರಿಕ 67-66 ಅಂಕಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿತು. ಅಮೆರಿಕ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚಿನ ಪದಕಗಳು ಸೇರಿದಂತೆ 126 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಚೀನಾ 40 ಚಿನ್ನದ ಪದಕಗಳು ಸೇರಿದಂತೆ 91 ಪದಕಗಳೊಂದಿಗೆ ಕ್ರೀಡಾಕೂಟವನ್ನು ಕೊನೆಗೊಳಿಸಿತು. 2008ರಲ್ಲಿ ಬೀಜಿಂಗ್​​ನಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಚೀನಾ 48 ಚಿನ್ನದ ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತ್ತು.

ಭಾರತ 5 ಕಂಚು, 1 ಬೆಳ್ಳಿ ಸೇರಿದಂತೆ ಒಟ್ಟು 6 ಪದಕಗಳೊಂದಿಗೆ 71ನೇ ಸ್ಥಾನದಲ್ಲಿದೆ. ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್ ತಲುಪಿದ ವಿನೇಶ್ ಫೋಗಟ್ ತನ್ನ ಅನರ್ಹತೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (ಸಿಎಎಸ್) ಪ್ರಶ್ನಿಸಿದ್ದರಿಂದ ಭಾರತಕ್ಕೆ ನಿರ್ಧಾರ ಪೂರಕವಾಗಿ ಬಂದರೆ ತನ್ನ ಪಟ್ಟಿಗೆ ಇನ್ನೂ ಒಂದು ಪದಕ ಸೇರಿಸಬಹುದು.

ಪಾಕಿಸ್ತಾನ 44 ವರ್ಷಗಳ ಬಳಿಕ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದು 62ನೇ ಸ್ಥಾನದಲ್ಲಿದೆ. ಪುರುಷರ ಜಾವೆಲಿನ್ ಫೈನಲ್​​ನಲ್ಲಿ ಅರ್ಷದ್ ನದೀಮ್ ಮೊದಲ ಸ್ಥಾನ ಪಡೆದರು. ಜಪಾನ್ 20 ಚಿನ್ನ ಸೇರಿದಂತೆ 45 ಪದಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಜಪಾನ್ 27 ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನ ಪಡೆದಿತ್ತು.

ಗ್ರೇಟ್ ಬ್ರಿಟನ್ 14 ಚಿನ್ನದ ಪದಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 18 ಚಿನ್ನದ ಪದಕಗಳನ್ನು ಗೆದ್ದು ಅಗ್ರ ನಾಲ್ಕು ಸ್ಥಾನಗಳನ್ನು ಗಳಿಸಿದೆ. ಆತಿಥೇಯ ಫ್ರಾನ್ಸ್ 16 ಚಿನ್ನದ ಪದಕಗಳೊಂದಿಗೆ ಅಗ್ರ 5ನೇ ಸ್ಥಾನ ಪಡೆದಿದೆ.