ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ನಡೆದ ಪ್ರತಿಷ್ಠಿತ ಪಾವೊ ನೂರ್ಮಿ ಗೇಮ್ಸ್ 2024 ರ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ.

ಈ ಸ್ಪರ್ಧೆಯಲ್ಲಿ ಅಂತಿಮವಾಗಿ 85.97 ಮೀಟರ್​ ಥ್ರೋನೊಂದಿಗೆ ಚೋಪ್ರಾ ಅಗ್ರಸ್ಥಾನ ಅಲಂಕರಿಸಿದರು. ನೀರಜ್ ಚೋಪ್ರಾಗೆ ಉತ್ತಮ ಪೈಪೋಟಿ ನೀಡಿದ ಫಿನ್​ಲ್ಯಾಂಡ್​ನ ಒಲಿವರ್ ಹೆಲ್ಯಾಂಡರ್ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದರು.

ಅದರಲ್ಲೂ ದ್ವಿತೀಯ ಸುತ್ತಿನಲ್ಲಿ 83.96 ಮೀಟರ್‌ಗಳನ್ನು ಎಸೆಯುವ ಮೂಲಕ ಚೋಪ್ರಾ ಅವರನ್ನು ಹಿಂದಿಕ್ಕಿದ್ದರು. ಆದರೆ ಮೂರನೇ ಸುತ್ತಿನಲ್ಲಿ ನೀರಜ್ ಚೋಪ್ರಾ ತೋಳ್ಬಲವನ್ನು ತೋರಿಸಿದ್ದಾರೆ. ಬರೋಬ್ಬರಿ 85.97 ಮೀಟರ್ ದೂರಕ್ಕೆ ಭರ್ಜಿ ಎಸೆದು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.