ದೆಹಲಿ: 23 ವರ್ಷದ ನೀರಜ್ ಚೋಪ್ರಾ ಅವರು 2020 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ತನ್ನ ಮೊದಲ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕವನ್ನು ತಂದು ಕೊಟ್ಟರು. ಆಗಸ್ಟ್ 7 ರಂದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ವಿಜೇತ ನೀರಜ್ ಚೋಪ್ರಾ ಅವರ ಸಾಧನೆಯನ್ನು ಸ್ಮರಿಸಲು ಸಲುವಾಗಿ ಭಾರತ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ)ವು ಈ ರಾಷ್ಟ್ರೀಯ ಜಾವೆಲಿನ್ ದಿನವನ್ನು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಜಾವೆಲಿನ್ ದಿನವನ್ನು ಆಚರಿಸಲಾಗುತ್ತದೆ.

ಹರಿಯಾಣದ ಖಾಂದ್ರಾ ಗ್ರಾಮದ ರೈತನ ಮಗನಾಗಿ ಹುಟ್ಟಿದ ನೀರಜ್ ಚೋಪ್ರಾ ಚಂಡೀಗಡ ಡಿಎವಿ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ತದನಂತರದಲ್ಲಿ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುವ ಅವಕಾಶವೊಂದು ಸಿಕ್ಕಿತು. ಹೀಗೆ ಭಾರತ ಮಾತೆಯ ಸೇವೆ ಮಾಡಿದ ನೀರಜ್ ಕ್ರೀಡಾ ಲೋಕದಲ್ಲಿ ಕೂಡ ಅಚ್ಚರಿ ಎಂಬಂತೆ ಗುರುತಿಸಿಕೊಂಡಿದ್ದಾರೆ. 2016ರ ಐಎಎಎಫ್ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಬಳಿಕವೇ ಈ ನೀರಜ್ ಎಲ್ಲರಿಗೂ ಪರಿಚಯವಾದದ್ದು. ಆ ಬಳಿಕ ಏಷ್ಯನ್ ಅಥ್ಲೆಟಕ್ಸ್ ಚಾಂಪಿಯನ್ಸ್, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹೀಗೆ ಕ್ರೀಡಾಕೂಟದಲ್ಲಿ ಚಿನ್ನದ ಬೇಟೆ ಆಡಿಯೇ ಬಿಟ್ಟರು. ಆಮೇಲೆ ನಡೆದದ್ದು ಕನಸು ಎನ್ನುವಂತೆ ಇಂದು ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಇನ್ನು 2020 ರಲ್ಲಿ ಟೋಕಿಯೊದಲ್ಲಿ 87.58 ಮೀಟರ್ ಜಾವೆಲಿನ್ ಎಸೆತದೊಂದಿಗೆ ಮೊದಲ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ಈ ಆಟಗಾರ ನಂತರದ ವರ್ಷಗಳಲ್ಲಿ ಎರಡು ಬಾರಿ ಚಿನ್ನವನ್ನು ಗೆದ್ದುಕೊಂಡರು. ನೀರಜ್ ಚೋಪ್ರಾರವರು ಜುಲೈ 2022 ರಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡರು. 2023 ರಲ್ಲಿ ವರ್ಷ ವಿಶ್ವ ಅಥ್ಲೆಟಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ಜಯಿಸಿದ್ದರು.

ಇನ್ನು ಈ ಬಾರಿ ಭಾರತದ ನೀರಜ್ ಚೋಪ್ರಾ ಅವರು ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಫೈನಲ್‌ಗೆ ಅರ್ಹತೆ ಪಡೆದಿದ್ದು, ನಾಳೆ ಫೈನಲ್ ಪಂದ್ಯ ನಡೆಯಲಿದೆ.

