ಬೆಂಗಳೂರು: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ.
‘ನಂದಿನಿ’ ಲಾಂಛನ ಇರುವ ನೂತನ ಜೆರ್ಸಿಯನ್ನು ಕೂಡ ಉಭಯ ತಂಡಗಳು ಈಗಾಗಲೇ ಬಿಡುಗಡೆಗೊಳಿಸಿದೆ. ಇದೀಗ ಕೆಎಂಎಫ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಉಭಯ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ನಂದಿನಿ ಲೋಗೊ ಇರುವ ಫೋಟೊ ಹಂಚಿಕೊಂಡಿದೆ.
ನಾವೆಲ್ಲರೂ ಕಾಯುತ್ತಿದ್ದ ಐತಿಹಾಸಿಕ ಕ್ಷಣ ಕೊನೆಗೂ ಬಂದಿದೆ. ನಂದಿನಿ ಲಾಂಛನವು ಸ್ಕಾಟ್ಲೆಂಡ್ ಜರ್ಸಿ ಮತ್ತು ಐರ್ಲೆಂಡ್ ಜರ್ಸಿಯ ಪ್ರಮುಖ ತೋಳಿನ ಮೇಲೆ ಮೊದಲ ಬಾರಿಗೆ ದೊಡ್ಡ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದೆ ಎಂದು ಕೆಎಂಎಫ್ ಟ್ವಿಟರ್ ಎಕ್ಸ್ನಲ್ಲಿ ಬರೆದುಕೊಂಡಿದೆ.
ನಂದಿನಿ ಹೆಸರಿನಲ್ಲಿ ಡೈರಿ ಉತ್ಪನ್ನ ಮಾರಾಟ ಮಾಡುತ್ತಿರುವ ಕೆಎಂಎಫ್ ವಿಶ್ವಕಪ್ನಂತ ಟೂರ್ನಿಯಲ್ಲಿ ತಂಡಗಳ ಪ್ರಾಯೋಜಕತ್ವ ಪಡೆದಿರುವುದು ನಿಜಕ್ಕೂ ಮಹತ್ವದ ಹೆಜ್ಜೆಯಾಗಲಿದೆ ಜತೆಗೆ ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ.
ದೇಶೀಯ ಮಟ್ಟದ ಉತ್ಪನ್ನವೊಂದು ವಿದೇಶಿ ಮಟ್ಟದಲ್ಲಿಯೂ ಪರಿಚಿತಗೊಳ್ಳಲಿದೆ. ಜತೆಗೆ ಅಮೂಲ್‌ಗೆ ತೀವ್ರ ಪೈಪೋಟಿ ನೀಡಲಿದೆ. ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎಡಗೈ ಮೇಲೆ ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ. ಜೂನ್ 4ರಂದು ಸ್ಕಾಟ್ಲೆಂಡ್ ತಂಡ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇಂಗ್ಲೆಂಡ್ ಎದುರಾಳಿ. ಐರ್ಲೆಂಡ್ ಜೂನ್ 5ರಂದು ಭಾರತ ವಿರುದ್ಧ ಆಡಲಿದೆ.

