ಪ್ಯಾರಿಸ್ ಒಲಿಂಪಿಕ್ಸ್ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಗೆಲ್ಲುವ ಮೂಲಕ ಅರ್ಷದ್ ನದೀಮ್ ಪಾಕಿಸ್ತಾನಕ್ಕೆ ಸ್ಟಾರ್ ಆಗಿದ್ದಾರೆ. ದೇಶವು ಸಂಭ್ರಮಾಚರಣೆಯಲ್ಲಿ ಮುಳುಗಿದ್ದು ಅರ್ಷದ್ ನದೀಮ್ರನ್ನ ಹುಡುಕಿಕೊಂಡು ಸಾಕಷ್ಟು ನಗದು ಬಹುಮಾನಗಳು, ಪ್ರಶಸ್ತಿಗಳು ಹಾಗೂ ಅಮೂಲ್ಯ ಉಡುಗೊರೆಗಳು ಬರುತ್ತಿವೆ. ಬೆನ್ನಲ್ಲೇ ಅರ್ಷದ್ ನದೀಮ್ಗೆ ಎಮ್ಮೆಯೊಂದು ಗಿಫ್ಟ್ ಆಗಿ ಬಂದಿದೆ.
ಅರ್ಷದ್ ನದೀಮ್ ಸಾಧನೆ ಗುರುತಿಸಿ ಅಲ್ಲಿನ ಸರ್ಕಾರ, ಕ್ರೀಡಾ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸುತ್ತಿವೆ. ಅರ್ಷದ್ ನದೀಮ್ಗೆ ಅವರ ಮಾವನೇ ಎಮ್ಮೆಯನ್ನು ಬಹುಮಾನವಾಗಿ ಕೊಟ್ಟಿದ್ದಾರೆ. ಹೌದು. . ಇದು ಪಾಕಿಸ್ತಾನದ ಗ್ರಾಮೀಣ ಪ್ರದೇಶದಲ್ಲಿ ಸಂಪ್ರದಾಯವಾಗಿದೆ. ಹಾಲು ಹಾಗೂ ಇತರ ಉತ್ಪನ್ನಗಳ ಆದಾಯ ಮೂಲವಾಗಿರುವ ಎಮ್ಮೆಯನ್ನ ನೀಡುವುದು ಅಲ್ಲಿನ ಪದ್ಧತಿ ಎಂದು ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಮಾತನಾಡಿದ ಅರ್ಷದ್ ನದೀಮ್ ಅವರ ಸೋದರ ಮಾವ ಮೊಹಮ್ಮದ್ ನವಾಜ್, ಇಲ್ಲಿ ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ಅತ್ಯಂತ ಗೌರವಾನ್ವಿತ, ಮೌಲ್ಯಯುತವಾಗಿದೆ. ನದೀಮ್ ಒಳ್ಳೆಯ ಹುಡುಗ. ನಮ್ಮ ಮನೆಗೆ ಬಂದರೆ ಯಾವುದಕ್ಕೂ ಹೆಸರಿಡದೇ ಮನೆಯಲ್ಲಿ ಏನಿದಿಯೋ ಅದನ್ನ ಊಟ ಮಾಡ್ತಾನೆ. ಜಾವೆಲಿನ್ ಎಂದರೆ ತುಂಬಾ ಇಷ್ಟ, ಮನೆ, ಹೊಲದ ಬಳಿ ಅಭ್ಯಾಸ ಮಾಡುತ್ತಿದ್ದ. ಇನ್ನು 6 ವರ್ಷಗಳ ಹಿಂದೆಯೇ ನನ್ನ ಮಗಳು ಆಯೇಷಾಳನ್ನು ನದೀಮ್ಗೆ ಕೊಟ್ಟು ಮದುವೆ ಮಾಡುವುದಾಗಿ ನಿಶ್ಚಯ ಮಾಡಲಾಗಿದೆ ಎಂದಿದ್ದಾರೆ.

